ರಥಸಪ್ತಮಿ: ಬೇಲೂರಲ್ಲಿ ಯೋಗ ಪ್ರದರ್ಶನಕ್ಕೆ ಅಡ್ಡಿ; ಯೋಗಪಟುಗಳ ಆಕ್ರೋಶ

| Published : Feb 17 2024, 01:20 AM IST

ರಥಸಪ್ತಮಿ: ಬೇಲೂರಲ್ಲಿ ಯೋಗ ಪ್ರದರ್ಶನಕ್ಕೆ ಅಡ್ಡಿ; ಯೋಗಪಟುಗಳ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗ ರಥಸಪ್ತಮಿ ಅಂಗವಾಗಿ ಯೋಗ ಪ್ರದರ್ಶನ ನೀಡಲು ಮುಂದಾದಾಗ ಪುರಾತತ್ವ ಇಲಾಖೆಯ ಸಿಬ್ಬಂದಿ ಅಡ್ಡಿಪಡಿಸಿದ್ದನ್ನು ಖಂಡಿಸಿ ಯೋಗಪಟುಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆಯಿತು.

ಪುರಾತತ್ವ ಇಲಾಖೆ ಸಿಬ್ಬಂದಿ ಕ್ರಮ । ವಿವಿಧ ಯೋಗ ಸಮಿತಿಗಳು ಕಿಡಿ

ಕನ್ನಡಪ್ರಭ ವಾರ್ತೆ ಬೇಲೂರು

ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗ ರಥಸಪ್ತಮಿ ಅಂಗವಾಗಿ ಯೋಗ ಪ್ರದರ್ಶನ ನೀಡಲು ಮುಂದಾದಾಗ ಪುರಾತತ್ವ ಇಲಾಖೆಯ ಸಿಬ್ಬಂದಿ ಅಡ್ಡಿಪಡಿಸಿದ್ದನ್ನು ಖಂಡಿಸಿ ಯೋಗಪಟುಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆಯಿತು.

ಹಲವಾರು ವರ್ಷಗಳಿಂದ ರಥಸಪ್ತಮಿ ದಿನ ಪಟ್ಟಣದ ವಿವಿಧ ಯೋಗ ಸಮಿತಿಗಳಿಂದ ಇಲ್ಲಿನ ಕೋಟೆ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗದ ಹೊರಗೆ ಇರುವ ಜಗಲಿಯ ಮೇಲೆ ಯೋಗ ಪ್ರದರ್ಶನ ನೀಡುತ್ತ ಬಂದಿದ್ದರು. ಅದರಂತೆ ಶುಕ್ರವಾರ ಬೆಳಿಗ್ಗೆ ಯೋಗ ಪ್ರದರ್ಶನ ನೀಡಲು ವಿವಿಧ ಯೋಗ ಸಮಿತಿಯ ಸದಸ್ಯರು ಬಂದಿದ್ದರು. ಜಗಲಿಯ ಮೇಲೆ ನೆಲಹಾಸು ಹಾಸಿ ಯೋಗ ಪ್ರದರ್ಶನಕ್ಕೆ ಮುಂದಾದ ಸಂದರ್ಭದಲ್ಲಿ ಪುರತತ್ವ ಇಲಾಖೆಯ ಶಿವು ಎಂಬ ಸಿಬ್ಬಂದಿ ಯೋಗ ಪ್ರದರ್ಶನಕ್ಕೆ ಅವಕಾಶ ನೀಡಲು ಪುರಾತತ್ವ ಇಲಾಖೆಯಿಂದ ಅನುಮತಿ ಪತ್ರ ತರಬೇಕು ಎಂದು ಅಡ್ಡಿಪಡಿಸಿದರು ಎಂದು ಯೋಗಪಟುಗಳು ದೂರಿದರು.

ದೇಗುಲದ ಮುಂಭಾಗದ ಜಗುಲಿಯ ಮೇಲೆ ಯಾವುದೇ ರೀತಿಯ ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಸಿಬ್ಬಂದಿ ಹೇಳಿದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯೋಗಪಟುಗಳು ತಾವು ಹಲವಾರು ವರ್ಷಗಳಿಂದ ಇದೆ ಜಗುಲಿಯ ಮೇಲೆ ರಥಸಪ್ತಮಿ ದಿನ ಸಾರ್ವಜನಿಕವಾಗಿ ಯೋಗ ಪ್ರದರ್ಶನ ಮಾಡುತ್ತ ಬಂದಿದ್ದೇವೆ. ಭಾರತದ ಯೋಗ ಧ್ಯಾನಕ್ಕೆ ಇಡೀ ವಿಶ್ವವೇ ತಲೆಬಾಗಿ ನಮಿಸಿ ಅಳವಡಿಸಿಕೊಳ್ಳುತ್ತಿದೆ. ಆದರೆ ಪುರಾತತ್ವ ಇಲಾಖೆ ರಥಸಪ್ತಮಿ ದಿನ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಇದಕ್ಕೆ ಪುರಾತತ್ವ ಇಲಾಖೆಯ ಸಿಬ್ಬಂದಿ ಶಿವು, ಕಾನೂನುಬಾಹಿರವಾಗಿ ಇಲ್ಲಿ ಯೋಗ ಪ್ರದರ್ಶನ ಮಾಡುತ್ತಿದ್ದು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಇವತ್ತು 20 ಜನ. ದೇಗುಲ ಜಗುಲಿಯನ್ನು ಬಳಸಿಕೊಂಡರೆ ನಾಳೆ ನೂರಾರು ಜನ ಬಂದು ಇದೇ ರೀತಿ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಾರೆ. ಪುರಾತತ್ವ ಇಲಾಖೆಯಿಂದ ಅನುಮತಿ ಪತ್ರ ತರಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ಯೋಗಪಟುಗಳು ಪ್ರತಿಕ್ರಿಯಿಸಿ, ಇಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಮಾಡುತ್ತಿಲ್ಲ. ಮೊದಲಿಗೆ ಜನರಿಗೆ ಯೋಗದಿಂದಾಗುವ ಅನುಕೂಲಗಳ ಬಗ್ಗೆ ಅರಿವು ಮೂಡಿಸಲು ಬಂದಿದ್ದೇವೆ ಎಂದು ತಮ್ಮ ಯೋಗ ಪ್ರದರ್ಶನ ಮುಂದುವರೆಸಿದರು.

ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗ ಯೋಗ ಪ್ರದರ್ಶನ ನೀಡಲು ಮುಂದಾದಾಗ ಪುರಾತತ್ವ ಇಲಾಖೆಯ ಸಿಬ್ಬಂದಿ ಅಡ್ಡಿ ಪಡಿಸಿದ್ದನ್ನು ಖಂಡಿಸಿ ಯೋಗಪಟುಗಳು ಆಕ್ರೋಶ ವ್ಯಕ್ತಪಡಿಸಿದರು.