ಸಾರಾಂಶ
-ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ
---ಕನ್ನಡಪ್ರಭ ವಾರ್ತೆ ಶಹಾಪುರ
ಕೇಂದ್ರದ ಬಿಜೆಪಿ ಸರ್ಕಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಕಾರ್ಮಿಕರಿಗೆ ನಿರಾಶೆ ಉಂಟು ಮಾಡಿದೆ. ಹಾಗೂ ದೇಶದ ಕಾರ್ಮಿಕರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿ, ಅಕ್ಷರ ದಾಸೋಹ ನಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಇದೆ ವೇಳೆ ಕೇಂದ್ರ ಬಜೆಟ್ ಪ್ರತಿಯನ್ನು ಸುಟ್ಟು ಪ್ರತಿಭಟಿಸಲಾಯಿತು.ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಮಿತಿ ಮುಖಂಡರು, ಪದಾಧಿಕಾರಿಗಳು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೇಂದ್ರದ ಬಜೆಟ್ ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ನಿರತರು ಮಾತನಾಡಿ, ಕೇಂದ್ರ ಸರ್ಕಾರ ಕಳೆದ 2014ರಿಂದ ತನಗೆ ಜವಾಬ್ದಾರಿ ಇದ್ದರೂ ಈ ಯೋಜನೆಗೆ ಕಿಂಚಿತ್ತು ಹಣ ಬಿಡುಗಡೆ ಮಾಡಿಲ್ಲ. ಹಾಗೆ ಮಾಡಿದ್ದೇಯಾದಲ್ಲಿ ಈಗ ಬಿಸಿಯೂಟ ಕಾರ್ಮಿಕರಿಗೆ 10,000 ರು. ಸಂಬಳ ಬರುತ್ತಿತ್ತು. ಯಾಕೆಂದರೆ ಈ ಯೋಜನೆಯ ಜವಾಬ್ದಾರಿ ಕೇಂದ್ರ ಸರ್ಕಾರಕ್ಕೂ ಇದೆ ಎಂದರು.
ಕಾರ್ಪೋರೇಟ್ ಸಂಸ್ಥೆಗಳಿಗೆ ಯೋಜನೆ ಉಸ್ತುವಾರಿ ವಹಿಸಬಾರದು, ಬಿಸಿಯೂಟ ತಯಾರಿಕೆ ಜವಾಬ್ದಾರಿಯನ್ನು ಅಧಿಕಾರಿ ಹಾಗೂ ಅಡುಗೆ ಸಿಬ್ಬಂದಿಗೆ ವಹಿಸಬೇಕು. ಹಾಜರಾತಿ ಆಧಾರದಲ್ಲಿ 19 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಪ್ರಯತ್ನ ಕೈಬಿಡಬೇಕು. ಗ್ರಾಮೀಣ, ನಗರ ಪ್ರದೇಶದಲ್ಲಿ ಎಲ್ಲ ವರ್ಗದ ದುಡಿಯುವ ಜನರು ಬೆಲೆ ಏರಿಕೆಯಿಂದಾಗಿ ಜೀವನ ನಡೆಸುವುದು ದುಸ್ತರವಾಗಿದೆ. ರಾಜ್ಯದಲ್ಲಿ ಅಕ್ಷರ ದಾಸೋಹದಡಿ ಸಾವಿರಾರು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೂಕ್ತ ಭದ್ರತೆ ಇಲ್ಲದೆ ಅವರು ದುಡಿಯುತ್ತಿದ್ದು, ಅನೇಕ ನೋವುಗಳು ಅನುಭವಿಸುತ್ತಿದ್ದಾರೆ. ದಲಿತ, ಸಂತ್ರಸ್ತ, ವಿಧವಾ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕು ಎಂದು ಒತ್ತಾಯ ಮಾಡಿದರು.ಅಕ್ಷರ ದಾಸೋಹ ನೌಕರ ಸಂಘದ ಗೌರವಾಧ್ಯಕ್ಷೆ ಸುನಂದಾ ಹಿರೇಮಠ, ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಖಜಾಂಚಿ ಮಂಜುಳ ಹೊಸಮನಿ, ತಾಲೂಕ ಮುಖಂಡರಾದ ಲಾಲಬೀ, ಜಯಶ್ರೀ ಮುಡಬೂಳ ಭಾಗವಹಿಸಿದ್ದರು.
-----ಫೋಟೊ: ಕೇಂದ್ರ ಸರ್ಕಾರ ಕಾರ್ಮಿಕರ ನಿರೀಕ್ಷೆ ಹುಸಿಗೊಳಿಸಿದೆ ಎಂದು ದೂರಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಶಹಾಪುರದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
9ವೈಡಿಆರ್12