ಕನ್ನಡಪ್ರಭ ವಾರ್ತೆ ಬೆಂಗಳೂರು

ನೀರು, ವಿದ್ಯುತ್, ಕಸ ವಿಲೇವಾರಿ, ನಿರ್ವಹಣೆ, ಒಳಚರಂಡಿ ಸೇರಿ ಯಾವುದೇ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೆ ಇದ್ದರೂ, ಹಣ ಕಟ್ಟಿಲ್ಲವೆಂದು ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆಯಡಿ ಬಡವರಿಗೆ ಹಂಚಿಕೆ ಮಾಡಿದ್ದ ಮನೆಗಳನ್ನು ರದ್ದುಪಡಿಸುತ್ತಿರುವುದಾಗಿ ಫಲಾನುಭವಿಗಳಿಗೆ ಕರ್ನಾಟಕ ಗೃಹ ಮಂಡಳಿ ನೋಟಿಸ್ ಜಾರಿ ಮಾಡುತ್ತಿದೆ.ಮಂಡಳಿಯ ನೋಟಿಸ್‌ನಿಂದ ಆತಂಕಗೊಂಡ ಫಲಾನುಭವಿಗಳು ಸೋಮವಾರ ನಗರದ ಕೆಂಪೇಗೌಡ ರಸ್ತೆಯಲ್ಲಿ ಕೆಎಚ್‌ಬಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಪಾರ್ಟ್‌ಮೆಂಟ್‌ನಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, ಮೊದಲು ಸರಿಯಾದ ಮೂಲ ಸೌಕರ್ಯ ಒದಗಿಸಿ ಎಂದು ಆಗ್ರಹಿಸಿದರು.

ದೊಡ್ಡ ನಾಗಮಂಗಲದಲ್ಲಿ ನಿರ್ಮಿಸಿರುವ ಫ್ಲ್ಯಾಟ್‌ಗಳನ್ನು 8 ತಿಂಗಳ ಹಿಂದೆ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಇಲ್ಲಿ ನೀರು, ವಿದ್ಯುತ್ ಸೌಲಭ್ಯ ಇಲ್ಲ. ಈ ಸೌಲಭ್ಯ ಇಲ್ಲದಿದ್ದರೂ ಸುಮಾರು 30 ಜನರು ಖಾಸಗಿಯಾಗಿ ನೀರಿನ ವ್ಯವಸ್ಥೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ. ಇನ್ನೂ ನೂರಾರು ಜನರು ಮೂಲಸೌಕರ್ಯ ಇಲ್ಲದ ಕಾರಣ ಹಣ ಕಟ್ಟಿದ್ದರೂ ಮನೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಫ್ಲ್ಯಾಟ್ ಖರೀದಿಸಿರುವ ಫಲಾನುಭವಿ ರಂಗಸ್ವಾಮಿ ಹೇಳಿದರು.

ಅಪಾರ್ಟ್‌ಮೆಂಟ್‌ ಆವರಣದಲ್ಲಿ ನಿರ್ವಹಣೆ ಇಲ್ಲ. ಕಸ ವಿಲೇವಾರಿ ವ್ಯವಸ್ಥೆ ಮಾಡಿಲ್ಲ. ಒಳಚರಂಡಿ ಸಮಸ್ಯೆಯೂ ಇದೆ. ಹೀಗಾಗಿ, ಹೊಸ ಮನೆಗೆ ಬರಲಾಗದೆ ಬಾಡಿಗೆ ಮನೆಯಲ್ಲೇ ವಾಸವಿದ್ದಾರೆ. ಸಾಲ ಮಾಡಿದವರು ಇಎಂಐ ಕಟ್ಟುತ್ತಿದ್ದಾರೆ. ಅದರ ಜೊತೆಗೆ ಒಂದಷ್ಟು ಫಲಾನುಭವಿಗಳು ಫ್ಲ್ಯಾಟ್ ಪ್ರವೇಶ ಸಾಧ್ಯವಾಗಿಲ್ಲ ಎಂದು ಬಾಕಿ ಮೊತ್ತವನ್ನು ಉಳಿಸಿಕೊಂಡಿದ್ದಾರೆ. ಅದರಲ್ಲಿ ಹಣಕಾಸಿನ ಸಮಸ್ಯೆ ಇರುವವರು ಕೂಡ ಇದ್ದಾರೆ. ಆದರೆ, ಅಂತಹ ಫಲಾನುಭವಿಗಳ ಹಂಚಿಕೆಯನ್ನೇ ಕೆಎಚ್‌ಬಿ ರದ್ದು ಮಾಡುತ್ತಿದೆ ಎಂದು ಮತ್ತೊಬ್ಬ ಫಲಾನುಭವಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.

ತಿಂಗಳಲ್ಲಿ ಸಮಸ್ಯೆ ಪರಿಹರಿಸುವ ಆಶ್ವಾಸನೆ: ಒಂದು ತಿಂಗಳಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಡುವುದಾಗಿ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಳ್ಕರ್ ಆಶ್ವಾಸನೆ ನೀಡಿದ್ದಾರೆ. ಅಲ್ಲದೇ, ಫ್ಲ್ಯಾಟ್ ಹಂಚಿಕೆ ರದ್ದುಗೊಳಿಸಿರುವ ನೋಟಿಸ್ ಹಿಂಪಡೆದು ಹಣ ಕಟ್ಟಲು ಇನ್ನಷ್ಟು ಕಾಲಾವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಹಿಂದೆಯು ಮೂಲಸೌಕರ್ಯಕ್ಕಾಗಿ ಪ್ರತಿಭಟನೆ ನಡೆಸಲಾಗಿತ್ತು. ಆಗ ನೀಡಿದ್ದ ಆಶ್ವಾಸನೆ ಈಡೇರಿಲ್ಲ ಎಂದು ಫಲಾನುಭವಿ ಚಂದ್ರು ಹೇಳಿದರು.