ವಿದ್ಯುತ್ ಕಡಿತಕ್ಕೆ ಆಕ್ರೋಶ<bha>;</bha> ರೈತರಿಂದ ಹೆದ್ದಾರಿ ಬಂದ್

| Published : Oct 12 2023, 12:00 AM IST

ವಿದ್ಯುತ್ ಕಡಿತಕ್ಕೆ ಆಕ್ರೋಶ<bha>;</bha> ರೈತರಿಂದ ಹೆದ್ದಾರಿ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕುರುಬರಹಳ್ಳಿ ಸಮೀಪ ಸತತ 8ಗಂಟೆ ರಸ್ತೆ ತಡೆದು ಪ್ರತಿಭಟನೆ, ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮುಗಿಸಿದ ಅನ್ನದಾತರು

ಕುರುಬರಹಳ್ಳಿ ಸಮೀಪ ಸತತ 8ಗಂಟೆ ರಸ್ತೆ ತಡೆದು ಪ್ರತಿಭಟನೆ, ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮುಗಿಸಿದ ಅನ್ನದಾತರು

ಕನ್ನಡಪ್ರಭ ವಾರ್ತೆ ಹರಿಹರ

ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಸಮಯ ಕಡಿತಗೊಳಿಸಿದ್ದು, ವಿರೋಧಿಸಿ ರೈತರು ತಾಲೂಕಿನ ಕುರುಬರಹಳ್ಳಿ ಸಮೀಪ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.

ತಾಲೂಕಿನ ಕುರುಬರಹಳ್ಳಿ ಸಮೀಪದಲ್ಲಿ ಬುಧವಾರ ಬೆಳಗ್ಗೆ ರಾಜ್ಯ ಹೆದ್ದಾರಿ ತಡೆದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ರಸ್ತೆ ತೆರವುಗೊಳಿಸಲ್ಲ. ಬೆಸ್ಕಾಂ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಭರವಸೆ ನೀಡುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಮುಖಂಡರು ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಬೆಸ್ಕಾಂ ರೈತರ ಜೀವನದಲ್ಲಿ ಆಟವಾಡುತ್ತಿದೆ. ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳು ನಾಶವಾಗಿದೆ. ಇದರಿಂದ ಕಂಗಾಲಾದ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯುತ್ ಸಮಯದ ಪ್ರಮಾಣ ದಿನದಿಂದ ದಿನಕ್ಕೆ ಕಡಿತ ಮಾಡುವುದು ನೋಡಿದರೆ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

7 ಗಂಟೆ ವಿದ್ಯುತ್‌ ಪೂರೈಸಿ:

ರೈತರಿಗೆ ಈ ಹಿಂದೆ ನೀಡುತ್ತಿದ್ದ ಸತತ ಏಳು ಗಂಟೆಗಳ ವಿದ್ಯುತ್ ಪೂರೈಕೆ ಯಥಾವತ್ತಾಗಿ ಮುಂದುವರಿಸಬೇಕು. ರೈತರು ಮಳೆ ಇಲ್ಲದೆ ಈಗಾಗಲೇ ತಮ್ಮ ಬೆಳೆಗಳ ಕಳೆದುಕೊಂಡಿದ್ದು, ಕೊಳವೆಬಾವಿ, ನದಿ, ಹಳ್ಳಗಳ ನಂಬಿಕೊಂಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ಜೀವನದಲ್ಲಿ ಕಣ್ಣಾಮುಚ್ಚಾಲೆ ಆಟವಾಡುವುದು ಸರಿಯಲ್ಲ ಎಂದರು.

ರೈತರ ಜೀವನದಲ್ಲಿ ಆಟವಾಡಬೇಡಿ:

ಕಾಂಗ್ರೆಸ್ ಸರ್ಕಾರಕ್ಕೆ ಬಿಟ್ಟಿ ಭಾಗ್ಯಗಳನ್ನ ನೀಡಿ ಎಂದು ಯಾರು ಕೇಳಿರಲಿಲ್ಲ. ನಿಮ್ಮ ಭಾಗ್ಯಗಳು ಮತ್ತು ಗ್ಯಾರಂಟಿಗಳ ನೀವೇ ಇಟ್ಟುಕೊಳ್ಳಿ. ನಮಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಿ. ಬೇಕಿದ್ದರೆ ಸರ್ಕಾರಕ್ಕೆ ನಾವೇ ತೆರಿಗೆ ಕಟ್ಟುತ್ತೇವೆ. ಇದೇ ಮೊದಲ ಬಾರಿಗೆ ರೈತರಿಗೆ ನೀಡುತ್ತಿದ್ದ ವಿದ್ಯುತ್ ಪ್ರಮಾಣ ಪಾತಾಳಕ್ಕೆ ಇಳಿಸಿರುವ ಕಾಂಗ್ರೆಸ್ ಸರ್ಕಾರ ರೈತರ ಜೀವನದಲ್ಲಿ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕಬಿದರಿ, ಸಾರಥಿ, ಕರಲಹಳ್ಳಿ, ಕೊಂಡಜ್ಜಿ, ಕೆಂಚನಹಳ್ಳಿ, ಕುರುಬರಹಳ್ಳಿ, ಹೊಟ್ಟಿಗೆನಹಳ್ಳಿ ಸೇರಿ ಇತರೆ ಹಳ್ಳಿಯಿಂದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳ ಕೂಗಿದರು.

ಈ ಸಂದರ್ಭದಲ್ಲಿ ಕೆಂಚನಹಳ್ಳಿ ಪರಮೇಶ್, ಕೊಂಡಜ್ಜಿ ಕುಮಾರ್, ವಿಜಯ್ ಕುಮಾರ್ ಕುರುಬರಹಳ್ಳಿ ರಾಜೇಶ್, ಗಂಗನರಸಿ ಕುಮಾರ್, ಗೌಡ್ರು ಉಮೇಶ್, ಗೌಡ್ರು ಬಸವರಾಜ್, ಪ್ರಭುದೇವ್, ಮಲ್ಲಪ್ಪ, ರಾಘವೇದ್ರ, ನಾಗೇಂದ್ರಪ್ಪ, ಕರಿಬಸಪ್ಪ, ಮಹದೇವಪ್ಪ, ಪ್ರದೀಪ್, ಪ್ರಜ್ವಲ್ ಸೇರಿ ನೂರಾರು ರೈತರಿದ್ದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ಉಚಿತ ವಿದ್ಯುತ್ ನೀಡುತ್ತಿದ್ದರು. ಅದೇ ರೀತಿ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿ ನಿಂತು ರಾಜ್ಯದಲ್ಲಿ ವಿದ್ಯುತ್ ಅಭಾವವಿದ್ದರೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ನೀಡಲಿ.

ರೈತ ಮುಖಂಡ

ಸಂಜೆ 6ಕ್ಕೆ ಪ್ರತಿಭಟನೆ ವಾಪಸ್‌ ಪಡೆದ ರೈತರು ಬೆಳಿಗ್ಗೆ ಹತ್ತು ಗಂಟೆಗೆ ಪ್ರಾರಂಭವಾಗಿದ್ದ ರೈತರ ಪ್ರತಿಭಟನೆ ಸಂಜೆ ಆರು ಗಂಟೆ ವರೆಗೆ ಸತತ 8 ಗಂಟೆಗಳ ಕಾಲ ನಿರಂತರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿ ನಂತರ ಬೆಸ್ಕಾಂ ಅಧಿಕಾರಿಗಳ ಭರವಸೆ ಮೇರೆಗೆ ಮುಕ್ತಾಯಗೊಳಿಸಿದರು. ಪ್ರತಿಭಟನಾಕಾರರು ಮಧ್ಯಾಹ್ನ ರಸ್ತೆಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿ ರಸ್ತೆ ಬಂದ್‌ ಮುಂದುವರಿಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಸಂಜೆ ಆರು ಗಂಟೆಗೆ ಪ್ರತಿಭಟನಾ ಸ್ಥಳಕ್ಕೆ ದಾವಣಗೆರೆಯ ಬೆಸ್ಕಾಂ ಇಇ ವಿನಯ್ ಭೇಟಿ ನೀಡಿ ಮೇಲಧಿಕಾರಿಗಳ ಬಳಿ ಚರ್ಚಿಸಿ ರೈತರ ಬೇಡಿಕೆಯಂತೆ ಬೆಳಿಗ್ಗೆ ನಾಲ್ಕು ಗಂಟೆ ರಾತ್ರಿ ಮೂರು ಗಂಟೆ ಕಾಲ ರೈತರ ಪಂಪ್‌ಸೆಟ್ ಗಳಿಗೆ ವಿದ್ಯುತ್‌ ನೀಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ಸತತ 8ಗಂಟೆ ರಸ್ತೆ ತಡೆ, ಪ್ರಯಾಣಿಕರ ಪರದಾಟ

ಬೆಳಗ್ಗೆ ೧೦ ರಿಂದಲೇ ರೈತರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುತ್ತಿದ್ದರೂ ಸ್ಥಳಕ್ಕೆ ಉನ್ನತ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಬಾರದ್ದರಿಂದ ಪ್ರತಿಭಟನಾಕಾರರು ಮತ್ತಷ್ಟು ಉಗ್ರ ಹೋರಾಟಕ್ಕೆ ಮುಂದಾದರು.

ಸತತ 8 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ಹೊಸಪೇಟೆಯಿಂದ ಹರಿಹರಕ್ಕೆ ಬರುವ ವಾಹನಗಳು ಹಾಗೂ ಹರಿಹರದಿಂದ ಹೊಸಪೇಟೆ ಕಡೆಗೆ ತೆರಳುವ ವಾಹನಗಳು ಸುಮಾರು 4 ರಿಂದ 5 ಕಿಲೋ ಮೀಟರ್ ಉದ್ದದವರೆಗೆ ಸರತಿಯಲ್ಲಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು. ಬೆಸ್ಕಾಂ ಎಇಇ ನಾಗರಾಜ್ ನಾಯ್ಕ್, ಪಿಎಸ್‌ಐ ಅರವಿಂದ್ ಪ್ರತಿಭಟನಕಾರರ ಮನವೊಲಿಸಲು ಹರಸಾಹಸಪಟ್ಟರು.