ಕೆರಗೋಡಿನಲ್ಲಿ ಹನುಮಾನ್‌ ಧ್ವಜ ತೆರವಿಗೆ ಆಕ್ರೋಶ

| Published : Jan 30 2024, 02:01 AM IST

ಸಾರಾಂಶ

ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ಜಮೆಯಾದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮಾನ್‌ ಧ್ವಜವನ್ನು ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹು- ಧಾ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿವಿಧಾನ ಸೌಧದಲ್ಲಿ ಜಮೆಯಾದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಾಜ್ಯದಲ್ಲಿ ಶ್ರೀರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗುತ್ತಿದೆ. ಕೆರಗೋಡುನಲ್ಲಿ ಕಾನೂನು ಬಾಹಿರವಾಗಿ ಹನುಮಾನ್‌ ಧ್ವಜ ಹಾರಿಸಿರಲಿಲ್ಲ. ಗ್ರಾಪಂ ಅನುಮತಿ ಪಡೆದುಕೊಂಡೆ ಧ್ವಜ ಹಾರಿಸಲಾಗಿತ್ತು. ಆದರೆ, ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಧ್ವಜವನ್ನು ಕೆಳಗಿಳಿಸಿದ್ದಾರೆ ಇದು ಖಂಡನಾರ್ಹ.

ಕೆರಗೋಡು ಗ್ರಾಮದ ಒಂದು ಧ್ವಜ ಕೆಳಗೆ ಇಳಿಸಿರಬಹುದು. ಇದಕ್ಕೆ ಪ್ರತಿಯಾಗಿ ರಾಜ್ಯಾದ್ಯಂತ ಸಾವಿರಾರು ಧ್ವಜ ಹಾರಾಡಲಿವೆ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಇಂತಹ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡಬಾರದು. ರಾಜ್ಯದಲ್ಲಿ ಸಾಕಷ್ಟು ಕಡೆ ಕಾನೂನು ಬಾಹಿರವಾಗಿ ದರ್ಗಾ ನಿರ್ಮಿಸಲಾಗಿದೆ. ಅವುಗಳನ್ನು ತೆರವುಗೊಳಿಸಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಈ ಕಾರ್ಯಕ್ಕೆ ನಾವು ಸಹ ಕೈ ಜೋಡಿಸುತ್ತೇವೆ ಎಂದರು.

ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, ಕೆರಗೋಡು ಗ್ರಾಪಂ ಆವರಣದಲ್ಲಿ ಹನುಮಾನ್‌ ಧ್ವಜ ಹಾರಿಸುವ ಕುರಿತು ಠರಾವು ಪಾಸ್ ಮಾಡಲಾಗಿತ್ತು. ಅದರ ಅನ್ವಯ ಧ್ವಜ ಹಾರಿಸಲಾಗಿತ್ತು. ಆದರೆ, ಹಿಂದೂ ವಿರೋಧಿ ಕಾಂಗ್ರೆಸ್ ಪೊಲೀಸರ ಮುಖಾಂತರ ಈ ಧ್ವಜವನ್ನು ಕೆಳಗಿಳಿಸಿ ಹಿಂದೂಗಳ ಭಾವನೆ ಹತ್ತಿಕ್ಕುವ ಯತ್ನ ಮಾಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ತೋಟಪ್ಪ ನಿಡಗುಂದಿ, ಕೃಷ್ಣಾ ಗಂಡಗಾಳೇಕರ, ವಸಂತ ನಾಡಜೋಶಿ, ಮುರಗೇಶ ಹೊರಡಿ, ಅಶೋಕ ವಾಲ್ಮೀಕಿ, ಮಂಜುನಾಥ ಕಾಟಕರ, ರಾಜು ಕಾಳೆ ಸೇರಿದಂತೆ ಹಲವರಿದ್ದರು.