ಸಾರಾಂಶ
ಮತದಾನದ ಹಕ್ಕು ಬಹಳ ವಿಶೇಷ. ಪ್ರಜೆಗಳು ನಿಸ್ವಾರ್ಥವಾಗಿ ತಮ್ಮ ಅಮೂಲ್ಯ ಮತ ಚಲಾಯಿಸಬೇಕು. ಅದನ್ನು ಕೇವಲ ಮತ ಹಾಕುವುದು ಎನ್ನದೆ ಮತದಾನ ಎಂದು ಕರೆದಿದ್ದಾರೆ. ಈ ಮತದಾನ ಎನ್ನುವುದು ನಮ್ಮ ಸಾಂವಿಧಾನಿಕ ಕೊಡುಗೆ ಮತ್ತು ಹಕ್ಕು ಹೌದು. ಹಾಗಾಗಿ ಮತದಾನದ ಹಕ್ಕನ್ನು ಪಡೆದಿರುವವರೆಲ್ಲರೂ ತಪ್ಪದೇ ಚಲಾಯಿಸಲೇಬೇಕು
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಮತದಾನ ಮಾಡಬೇಕೇ ಹೊರತು ಮಾರಿಕೊಳ್ಳಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್. ರೇಖಾ ಹೇಳಿದರು.ನಗರದ ಸರ್ಕಾರಿ ಪದವಿ ಮಹಾ ವಿದ್ಯಾಲಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ಹಕ್ಕು ಬಹಳ ವಿಶೇಷ. ಪ್ರಜೆಗಳು ನಿಸ್ವಾರ್ಥವಾಗಿ ತಮ್ಮ ಅಮೂಲ್ಯ ಮತ ಚಲಾಯಿಸಬೇಕು. ಅದನ್ನು ಕೇವಲ ಮತ ಹಾಕುವುದು ಎನ್ನದೆ ಮತದಾನ ಎಂದು ಕರೆದಿದ್ದಾರೆ. ಈ ಮತದಾನ ಎನ್ನುವುದು ನಮ್ಮ ಸಾಂವಿಧಾನಿಕ ಕೊಡುಗೆ ಮತ್ತು ಹಕ್ಕು ಹೌದು. ಹಾಗಾಗಿ ಮತದಾನದ ಹಕ್ಕನ್ನು ಪಡೆದಿರುವವರೆಲ್ಲರೂ ತಪ್ಪದೇ ಚಲಾಯಿಸಲೇಬೇಕು ಎಂದರು.ಮುಂದಿನ ಮಕ್ಕಳೆ ನಾಳಿನ ಪ್ರಜೆಗಳು. ಯುವಕರು ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೇ ನಿಸ್ವಾರ್ಥದಿಂದ ಮತ ಚಲಾಯಿಸಿದಾಗ ಮಾತ್ರ ನಿಜ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದರು.
ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಮಾತನಾಡಿ, ಯುವಕರೇ ರಾಷ್ಟ್ರದ ಭವಿಷ್ಯ, ಪ್ರಜಾಪ್ರಭುತ್ವದ ಚುನಾವಣೆಯ ಮತದಾನ ವ್ಯವಸ್ಥೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ಯುವ ಪೀಳಿಗೆಯಿಂದ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯವೆಂದರು.ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಭಾರತವು ಪ್ರಜೆಗಳಿಗೆ ಜಾತಿ, ಬಣ್ಣ, ಮತ, ಧರ್ಮ ಮುಂತಾದವುಗಳ ಹಾಗೂ ಭಾಷೆಯಲ್ಲಿ ಭಿನ್ನತೆ ಇದ್ದರೂ ಸಹ ಮತ ಹಕ್ಕನ್ನು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಬೂತ್ ಮಟ್ಟದ ಅಧಿಕಾರಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿದರು. ಜಿಲ್ಲಾ ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರ ಎಲ್. ಹೊನೋಲೆ ಅವರು ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯಿತಿ ಸಿಪಿಓ ಗುರುನಾಥ ಗೌಡಪ್ಪನ್ನೋರ್, ಚುನಾವಣೆ ತಹಸೀಲ್ದಾರ್ ಸಂತೋಷಿ ರಾಣಿ, ಯಾದಗಿರಿ ತಹಸೀಲ್ದಾರ್ ಸುರೇಶ ಅಂಕಲಗಿ, ಲೀಡ್ ಕಾಲೇಜು ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ, ಜಿಪಂ ಎನ್ಆರ್ಡಿಎಂಎಸ್ ಪ್ರಾಜೆಕ್ಟ್ ಆಫೀಸರ್ ಸಿದ್ರಾಮರೆಡ್ಡಿ, ಚುನಾವಣೆ ಶಿರಸ್ತೇದಾರ ಶಬ್ಬೀರ್ ಪಟೇಲ್ ಇತರರಿದ್ದರು.