ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ

| Published : Sep 27 2024, 01:17 AM IST

ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಗೆ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶ್ರೀರಂಗಪಟ್ಟಣ - ಬೀದರ್ ರಾಷ್ಟ್ರೀಯ ಹೆದ್ದಾರಿ(೧೫೦ಎ) ನಿರ್ಮಾಣವನ್ನು ಪೂರೈಸಿ ಕಳೆದ ದಿನಾಂಕ 23ನೇ ಸೋಮವಾರದಂದು ಹಿರಿಯೂರು ಮೂಲಕ ಬಳ್ಳಾರಿಗೆ ಹೋಗುವ ವಾಹನಗಳಿಗೆ ಸಿದ್ದಾಪುರ ಗೇಟ್‌ ಬೈಪಾಸ್ ರಸ್ತೆ ಮೂಲಕ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಶ್ರೀರಂಗಪಟ್ಟಣ - ಬೀದರ್ ರಾಷ್ಟ್ರೀಯ ಹೆದ್ದಾರಿ(೧೫೦ಎ) ನಿರ್ಮಾಣವನ್ನು ಪೂರೈಸಿ ಕಳೆದ ದಿನಾಂಕ 23ನೇ ಸೋಮವಾರದಂದು ಹಿರಿಯೂರು ಮೂಲಕ ಬಳ್ಳಾರಿಗೆ ಹೋಗುವ ವಾಹನಗಳಿಗೆ ಸಿದ್ದಾಪುರ ಗೇಟ್‌ ಬೈಪಾಸ್ ರಸ್ತೆ ಮೂಲಕ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.

ಈ ಬಗ್ಗೆ ಮಾಹಿತಿ ಪಡೆದ ಸುತ್ತಮುತ್ತಲ ಗ್ರಾಮಸ್ಧರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗ್ರಾಮಗಳಿಗೆ ಹೈವೆಯಿಂದ ಸಂರ್ಪಕ ರಸ್ತೆ ನಿರ್ಮಿಸದೆ ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ದೂರಿ ಗ್ರಾಮೀಣ ಭಾಗದ ಸುತ್ತಮುತ್ತಲಿನ ಜನರು ಪ್ರಾಧಿಕಾರದ ವಿರುದ್ಧ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಮಾರ್ಗದೂದ್ದಕ್ಕೂ ಯಾವುದೇ ಅಪಾಯ ಸೂಚಿಸುವ ನಾಮಫಲಕಗಳನ್ನು ಅಳವಡಿಸಿದೆ ನಿರ್ಲಕ್ಷ್ಯತೋರಿದ್ದಾರೆ. ನರಹರಿ ನಗರದ ಹಿಂಭಾಗದ ರೈಲ್ವೆ ಮಾರ್ಗಕ್ಕೆ ಯಾವುದೇ ಸೂಕ್ತ ರಸ್ತೆಯನ್ನು ಮಾಡದೆ ಇರುವುದರಿಂದ ಅಲ್ಲಿನ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದರು.

ವೀರದಿಮ್ಮನಹಳ್ಳಿ ಗ್ರಾಮಕ್ಕೂ ಸಹ ಸಂಪರ್ಕ ರಸ್ತೆಯನ್ನು ನಿರ್ಮಿಸು ಏಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು, ಇದರಿಂದ ಗ್ರಾಮದಿಂದ ಬರುವ ವಾಹನಗಳು, ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಹೋಗಬೇಕಿದೆ ಎಂದು ತಿಳಿಸಿದರು.

ಆದರೆ, ಇಲ್ಲಿ ಯಾವುದೇ ರಕ್ಷಣಾ ವ್ಯವಸ್ಥೆ ಮಾಡಿಲ್ಲ. ಇದರಿಂದ ಸಾರ್ವಜನಿಕರು ಕೈಯಲ್ಲಿ ಪ್ರಾಣಹಿಡಿದು ರಸ್ತೆ ದಾಟಬೇಕಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ನಡೆಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ಕ್ಷೇತ್ರ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ತಾಲೂಕು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಮುಷ್ಕರ ನಿರತ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮುಂದಾಲೋಚನೆ ಇಲ್ಲದೆ ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸದೇ ಇರುವುದು ಕಂಡು ಬಂತು. ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು, ಸಿದ್ದಾಪುರ, ವೀರದಿಮ್ಮನಹಳ್ಳಿ, ಸಾಣಿಕೆರೆ ಮುಂತಾದ ಗ್ರಾಮಗಳ ಸಂಪರ್ಕ ರಸ್ತೆಯನ್ನು ನಿರ್ಮಿಸುವಂತೆ ನಿರ್ದೇಶನ ನೀಡಿದರು. ನಂತರ ಶಾಸಕರ ಭರವಸೆ ಮೇರೆಗೆ ಮುಷ್ಕರವನ್ನು ವಾಪಾಸ್ ಪಡೆಯಲಾಯಿತು.

ಜಿಲ್ಲಾಧಿಕಾರಿ ಜಿ. ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿಜಯಭಾಸ್ಕರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ದಿವ್ಯನಾಥ, ಪ್ರವೀನ್, ಜೀಲಾನ್, ತಹಸೀಲ್ದಾರ್ ರೇಹಾನ್‌ಪಾಷ, ಗ್ರಾಮಸ್ಥರಾದ ಜಗದೀಶ್‌ನಾಯ್ಕ, ಸುನೀಲ್‌ಕುಮಾರ್, ಕುಮಾರ್‌ನಾಯ್ಕ, ಅಶೋಕ್‌ನಾಯ್ಕ, ಸಿದ್ದಾಪುರ ಮಂಜುನಾಥ, ರುದ್ರೇಶ್, ದರ್ಶನ್ ಮುಂತಾದವರು ಉಪಸ್ಥಿತರಿದ್ದರು.