ನರಗುಂದ: ಪುರಸಭೆ ಅಧಿಕಾರಿಗಳು ನೀರಿನ ಕರ ಸಾರ್ವಜನಿಕರ ಗಮನಕ್ಕೆ ತರದೆ ಏಕಾಏಕಿ ನೀರಿನ ಕರ ಹೆಚ್ಚಿಸಿದ್ದು, ಕೂಡಲೇ ಕರ ಇಳಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳ ಮುಖಂಡ ರಾಘವೇಂದ್ರ ಗುಜಮಾಗಡಿ ತಿಳಿಸಿದರು.ಮಂಗಳವಾರ ಪಟ್ಟಣದ ಪುರಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, 23 ವಾರ್ಡ್‌೯ಗಳಿಗೆ ಪ್ರತಿ ವಾರಕ್ಕೊಂದು ಸಲ ಮಾತ್ರ ನಲ್ಲಿಗಳಿಗೆ ಪುರಸಭೆಯವರು ನೀರು ಪೂರೈಕೆ ಮಾಡುತ್ತಾರೆ.
ಜನರಿಗೆ ಪ್ರತಿದಿನ ನಲ್ಲಿ ನೀರು ಸಾಲದ್ದರಿಂದ ಬೇರೆ ವಾರ್ಡ್‌ಗಳಿಗೆ ಹೋಗಿ ನೀರು ಸಂಗ್ರಹ ಮಾಡಿಕೊಳ್ಳುವ ಪರಿಸ್ಥಿತಿ ಪಟ್ಟಣದಲ್ಲಿದೆ. ಮೇಲಾಗಿ ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ ಪುರಸಭೆ ಅಧಿಕಾರಿಗಳು ಯಾರು ಗಮನಕ್ಕೆ ತರದೆ ತುಘಲಕ್ ದರ್ಬಾರ್ ರೀತಿಯಲ್ಲಿ 1 ವರ್ಷಕ್ಕೆ ₹1500 ಇದ್ದುದ್ದನ್ನು ದಿಢೀರ್ ₹1800ಕ್ಕೆ ಏರಿಸಿದ್ದು ಖಂಡನೀಯ ಎಂದರು.ಈಗಲೂ ಪುರಸಭೆ ಅಧಿಕಾರಿಗಳಿಗೆ ಕಾಲ ಮಿಂಚಿಲ್ಲ. ಏರಿಕೆ ಮಾಡಿರುವ ನೀರಿನ ಕರವನ್ನು ಕಡಿಮೆ ಮಾಡದಿದ್ದರೆ ಸಾರ್ವಜನಿಕರ ಜತೆ ಪುರಸಭೆ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.ಪುರಸಭೆ ಅಧಿಕಾರಿ ಸುಭಾಸ ಕದಮ್ಮಪೂರ ಅವರು, ಮನವಿ ಸ್ವೀಕರಿಸಿ, ಈ ಬಗ್ಗೆ ಚರ್ಚೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಚೆನ್ನು ನಂದಿ, ಮಾರುತಿ ಭೋಸ್ಲೆ, ನಾಗೇಶ ಅಪೋಜ, ಶಿವಯೋಗಿ ಬೆಂಡಿಗೇರಿ, ಜಿ.ಆರ್. ಕದಂ, ಎಂ.ಎಂ. ಜಾವೂರ, ಮಂಜುನಾಥ ದೊಡ್ಡಮನಿ ಸೇರಿದಂತೆ ಮುಂತಾದವರು ಇದ್ದರು.ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ಗದಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಹಾಗೂ ತಾಲೂಕು ಘಟಕ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಎಫ್‌ಐಡಿಯಿಂದ ರಾಸಾಯನಿಕ ಗೊಬ್ಬರ ವಿತರಣಾ ಕ್ರಮ ಕೈ ಬಿಡಬೇಕು. ಎಂಎಸ್‌ಪಿ ಕೇಂದ್ರಗಳನ್ನು 12 ತಿಂಗಳು ತೆರೆಯಬೇಕು. ವೇರ್ ಹೌಸ್ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ನಿರ್ಮಿಸಬೇಕು. ದೇಸಿ ಹಸುವಿಗೆ ಸಹಾಯಧನ ಕೊಡಬೇಕು. ಮಂಗಗಳ ಹಾವಳಿಯಿಂದ ರೈತರಿಗೆ ನಷ್ಟ ಅವುಗಳನ್ನು ಅರಣ್ಯ ಇಲಾಖೆ ಹಿಡಿದು ಬೇರೆಕಡೆ ಕಳಿಸಬೇಕು.ಬೆಳೆ ವಿಮೆ ಬಯೋ ಮೆಟ್ರಿಕ್ ಸೆಟ್ ಲೈಟ್ ಮುಖಾಂತರ ಸಮೀಕ್ಷೆ ಮಾಡಿ ವಿಮೆ ಮಂಜೂರು ಮಾಡಬೇಕು. ಕಳಪೆ ಬೀಜ ಪರಿಶೀಲಿಸಿ, ಒಳ್ಳೆ ಗುಣಮಟ್ಟದ ಬೀಜಗಳನ್ನು ವಿತರಿಸಬೇಕು. ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿಯಲ್ಲಿ ರೈತರಿಗೆ ದಾರಿ ನಿರ್ಮಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.ಈ ವೇಳೆ ರೈತ ಸಂಘದ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ರೈತರು ಇದ್ದರು.