ಪಟ್ಟಣದ ಪಪಂ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ನೀರು ಸರಬರಾಜು ಮಾಡುತ್ತಿರುವ 11 ಜನ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕಚೇರಿಯ ಎದುರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಲಾಯಿತು.
ಹಿರೇಕೆರೂರು: ಪಟ್ಟಣದ ಪಪಂ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿಯಲ್ಲಿ ನೀರು ಸರಬರಾಜು ಮಾಡುತ್ತಿರುವ 11 ಜನ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕಚೇರಿಯ ಎದುರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಲಾಯಿತು.
ಹೊರಗುತ್ತಿಗೆ ಕಾರ್ಮಿಕ ಮುಖಂಡ ನಾಗರಾಜ ತಿಪ್ಪಣ್ಣನವರ ಮಾತನಾಡಿ, ಪಟ್ಟಣದಲ್ಲಿ ನೀರು ಸರಬರಾಜು ಮಾಡುವ 11 ಜನ ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ತಿಂಗಳು ಇಎಸ್‌ಐ ಹಾಗೂ ಇಡಿಎಫ್ ಕಡಿತವಾಗುತ್ತಿದ್ದು. ಇದು ಹೆಸರಿಗಷ್ಟೇ, ಇಲ್ಲಿಯವರೆಗೆ ಯಾವೊಬ್ಬ ಕಾರ್ಮಿಕನಿಗೆ 11 ವರ್ಷಗಳಿಂದ ಇಎಸ್‌ಐ ಕಾರ್ಡನ್ನು ವಿತರಿಸಿಲ್ಲ. ಕಾರ್ಮಿಕರಿಗೆ ಆಸ್ಪತ್ರೆಯ ತುರ್ತು ಸಂದರ್ಭದಲ್ಲಿ ಈ ಕಾರ್ಡ್ ಅತಿ ಅವಶ್ಯವಾಗಿದೆ. ಈ ಬಗ್ಗೆ ಪಪಂ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರು ಕೂಡಾ ಕಾರ್ಡ್ ಕೊಡಿಸುವಲ್ಲಿ ವಿಫಲರಾಗಿದ್ದು, ಇದರಲ್ಲಿ ಮುಖ್ಯಾಧಿಕಾರಿಗಳು ಮತ್ತು ಅಕೌಂಟೆಂಟ್ ಕೂಡಾ ಶ್ಯಾಮಿಲಾಗಿ ಭಾರಿ ಹುನ್ನಾರ ನಡೆಸಿರುವುದು ಮೆಲ್ನೋಟಕ್ಕೆ ಕಂಡು ಬರುತ್ತಿದೆ. 2015-16ರಿಂದ ಇಲ್ಲಿಯವರೆಗೆ ಬರೊಬ್ಬರಿ 11 ವರ್ಷಗಳಿಂದ ಮರು ಟೆಂಡರ್ ಕರೆದಿಲ್ಲ. ಇದರಿಂದ ಕಾರ್ಮಿಕರಿಗೆ ಹೊಸದಾಗಿ ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪಡೆಯುವಲ್ಲಿ ಭಾರಿ ಅನ್ಯಾಯವಾದಂತಾಗಿದೆ. ಕೂಡಲೇ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಅಲ್ಲಿಯವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು.ಕಾರ್ಮಿಕರಾದ ಶಿವಪ್ಪ ಬಾಳಂಬೀಡ, ಮಂಜುನಾಥ ವಡ್ಡರ, ವಸಂತ ಓಲೇಕಾರ, ಮಂಜುನಾಥ ಓಲೇಕಾರ, ಮರಿಯಪ್ಪ ಮುಗಳಿಹಳ್ಳಿ, ಲೋಕಪ್ಪ ಎ.ಕೆ., ಕಿರಣ ಹರಿಜನ, ಚಂದ್ರಪ್ಪ ಬಾಳಂಬೀಡ, ಪ್ರವೀಣ ಓಲೇಕಾರ, ಮಂಜು ಚಳಗೇರಿ ಇದ್ದರು.