ಸಾರಾಂಶ
ಶಿಗ್ಗಾಂವಿ: ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಹಾಗೂ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರು 5 ತಿಂಗಳಿನಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಗಾರ್ಡನ್ ಸಿಬ್ಬಂದಿ, ವಾಹನ ಚಾಲಕರು, ಭದ್ರತಾ ಕೆಲಸಗಾರರು, ಕಚೇರಿ ಸಹಾಯಕರು ಹಾಗೂ 20ಕ್ಕೂ ಹೆಚ್ಚು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರಿಗೆ ಸುಮಾರು ೫ ತಿಂಗಳಕ್ಕೂ ಹೆಚ್ಚಿನ ಸಂಬಳ ನೀಡಿಲ್ಲ ಮತ್ತು ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸಂಬಳ ನೀಡುತ್ತಿದ್ದಾರೆ. ಅದನ್ನೂ ಸಮರ್ಪಕವಾಗಿ ನೀಡಿಲ್ಲ. ಕಳೆದ 5 ತಿಂಗಳಿನಿಂದ ಹೊರಗುತ್ತಿಗೆ ಸಿಬ್ಬಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ.ದೂರದ ಊರುಗಳಿಂದ ಬಂದು ಸೇವೆ ಸಲ್ಲಿಸುವ ಸಿಬ್ಬಂದಿ ಶಿಗ್ಗಾಂವಿ, ಹಾವೇರಿ ಸೇರಿದಂತೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಆದರೆ ಸಕಾಲಕ್ಕೆ ವೇತನ ಪಾವತಿಯಾಗದ ಕಾರಣಕ್ಕಾಗಿ ಬಾಡಿಗೆ ಮನೆಯವರು ಸಿಬ್ಬಂದಿಯನ್ನು ಹೊರಗೆ ಹಾಕುವ ಪರಿಸ್ಥಿತಿ ಎದುರಾಗಿದ್ದು, ಸ್ಥಳೀಯ ನೌಕರರು ಸಹ ವೇತನವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಸಾಕಷ್ಟು ಬಾರಿ ಕುಲಪತಿಗಳು, ಕುಲಸಚಿವರನ್ನು ವೇತನ ಪಾವತಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ ಅವರು ಮಾಡುವುದಾಗಿ ಹೇಳುತ್ತಾರೆ ವಿನಾ ಇದುವರೆಗೂ ಸಂಬಳವಿಲ್ಲ. ಇದನ್ನೇ ನಂಬಿಕೊಂಡು ಇರುವ ನಮಗೆ ದೈನಂದಿನ ಜೀವನ ನಿರ್ವಹಣೆ ಕಷ್ಟವಾಗಿದೆ. ಹಕ್ಕಿನಿಂದ ಸಂಬಳ ಕೇಳಿದರೆ ಆ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ಕೆಲಸದ ಆದೇಶ ನೀಡುವಾಗ ಸತಾಯಿಸುತ್ತಾರೆ. ಈ ಭಯದಿಂದ ಯಾರೂ ಅವರ ವಿರುದ್ಧ ಹೇಳಿಕೆ ನೀಡುವುದಿಲ್ಲ ಹಾಗೂ ಹೋರಾಟಕ್ಕೆ ಇಳಿಯುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ತಿಳಿಸಿದ್ದಾರೆ.
ವೇತನ ಬಾಕಿ: ಕಾಯಂ ಸಿಬ್ಬಂದಿಗೆ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಿಂದ ವೇತನ ಪಾವತಿಸಲಾಗುತ್ತಿದೆ. ಆದರೆ ವಿವಿಯಿಂದ ಪಾವತಿಸಬೇಕಾದ ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ವೇತನ ಪಾವತಿ ಬಾಕಿ ಇದೆ ಎಂದು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.