ವೇತನವಿಲ್ಲದೆ ಪರದಾಡುತ್ತಿರುವ ಹೊರಗುತ್ತಿಗೆ ನೌಕರರು

| Published : May 30 2024, 12:47 AM IST

ಸಾರಾಂಶ

ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ನೌಕರರು ಬಾಕಿ ನಿಂತಿರುವ 6 ತಿಂಗಳ ವೇತನ ಬಿಡುಗಡೆ ಮಾಡುವಂತೆ ಕೋರಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಕಳೆದ ಆರು ತಿಂಗಳಿಂದ ವೇತನ ಇಲ್ಲದೆ ಪರದಾಡುತ್ತಿದ್ದ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ನೌಕರರು ಬುಧವಾರ ಬೆಳಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗದೆ ಧರಣಿ ನಡೆಸಿದರು.

ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾನ್-ಕ್ಲಿನಿಕಲ್‌ ವಿಭಾಗದಲ್ಲಿ 10 ಜನ ಹೊರಗುತ್ತಿಗೆ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಡಿಸೆಂಬರ್‌ ನಿಂದ ಇಲ್ಲಿನವರೆಗೂ ಮಾಸಿಕ ವೇತನ ನೀಡಿಲ್ಲ. ಎಲ್ಲರಂತೆ ನಮಗೂ ನಮ್ಮದೆ ಸಮಸ್ಯೆಗಳಿದ್ದು, ಕೂಡಲೇ ವೇತನ ನೀಡುವಂತೆ ಗುತ್ತಿಗೆ ನೌಕರರು ಆಗ್ರಹಿಸಿದರು.

ಈ ಹಿಂದೆ ಬ್ರೈಟ್‌ ಡಿಟೆಕ್ಟಿವ್‌ ಏಜೆನ್ಸಿಯವರಿಗೆ ಹೊರಗುತ್ತಿಗೆ ವಿಭಾಗ ನೀಡಲಾಗಿತ್ತು. ಅವರು ನಿರ್ವಹಣೆ ಮಾಡಲಾಗದೆ ಫೆಬ್ರವರಿ 2024 ರಲ್ಲಿ ಇಲಾಖೆಯೊಂದಿಗೆ ಮಾಡಿಕೊಂಡ ಒಪ್ಪಂದ ರದ್ದು ಮಾಡಿಕೊಂಡಿದೆ. ಬ್ರೈಟ್‌ ಏಜೆನ್ಸಿ ನೌಕರರಿಗೆ ಬಾಕಿ ಮೂರು ತಿಂಗಳ ವೇತನ ಪಾವತಿಸಬೇಕಿದೆ. ನಂತರ ಮಾರ್ಚ್‌ನಿಂದ ಸಾಯಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಅವರೂ ಕೂಡ ಕಳೆದ ಮೂರು ತಿಂಗಳ ವೇತನವನನ್ನು ಪಾವತಿಸಿಲ್ಲ.

ಗುತ್ತಿಗೆ ಸಂಸ್ಥೆ ಹಾಗೂ ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಮನವಿ ಮಾಡಿದ್ದರೂ, ಕಳೆದ 6 ತಿಂಗಳಿಂದ ವೇತನ ದೊರೆತಿಲ್ಲ. ಇದರಿಂದಾಗಿ ಗೃಹಕೃತ್ಯದ ಸಮಸ್ಯೆಗಳು ನಿತ್ಯವೂ ಬೆಳೆಯುತ್ತಿವೆ. ಶಾಲೆಗಳು ಆರಂಭವಾಗುತ್ತಿದ್ದು ಓದುವ ಮಕ್ಕಳ ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರಕ್ಕೆ ಹಣ ಜೋಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ ಇದಾವುದನ್ನೂ ಹೊರಗುತ್ತಿಗೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಗಳು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.

ಖಾಯಂ ನೌಕರರ ಕೊರತೆಯಿಂದ ತಾತ್ಕಾಲಿಕ ಹೊರಗುತ್ತಿಗೆ ಕೆಲಸಗಾರರಿಂದ ಸೇವೆ ಪಡೆಯಲಾಗುತ್ತಿದೆ. ಕೊರೋನಾ ಸಮಯದಲ್ಲಿ ಎರಡು ವರ್ಷಗಳ ಕಾಲ ಕೆಲವು ನೌಕರರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು, ಮತ್ತೆ ಕೆಲವರನ್ನು ತರಳಬಾಳು ಮಠವು ಸಿರಿಗೆರೆಯ ಹಾಸ್ಟೆಲ್‌ನಲ್ಲಿ ಆರಂಭಿಸಿದ್ದ ಕೋವಿಡ್‌ ಕೇಂದ್ರದ ನಿರ್ವಹಣೆಗೆ ಸ್ಥಳಾಂತರ ಮಾಡಿದ್ದರು. ಕೋವಿಡ್‌ ಅವಧಿಯಲ್ಲಿ ಪ್ರಾಣ ಭಯ ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ ನಮಗೆ ಕೋವಿಡ್‌ ಅವಧಿಯ ಸಂಭಾವನೆ ನೀಡಿಲ್ಲ ಎಂದು ಹೊರಗುತ್ತಿಗೆ ನೌಕರರು ದೂರಿದರು. ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಜಿ. ದೇವರಾಜ್‌, ರಾಘವೇಂದ್ರ ಸೇರಿ ಗುತ್ತಿಗೆ ನೌಕರರು ಇದ್ದರು.

ವೇತನ ಬಿಡುಗಡೆಗೆ ಕ್ರಮ

ಹೊರಗುತ್ತಿಗೆದಾರರ ವೇತನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಗುತ್ತಿಗೆಯಿಂದ ಹಿಂದೆ ಸರಿದಿರುವ ಬ್ರೈಟ್‌ ಸಂಸ್ಥೆ ಕೊಡಬೇಕಾಗಿರುವ ಬಾಕಿ ವೇತನ ಅವರಿಂದ ಕೊಡಿಸಲಾಗುವುದು. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಹೊರ ಗುತ್ತಿಗೆದಾರರ ಹಿತವನ್ನು ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಅವರು ಸಮಸ್ಯೆಯನ್ನು ಅರಿತು ಕರ್ತವ್ಯಕ್ಕೆ ಹಾಜರಾಗುವಂತೆ ಸಮುದಾಯ ಆರೋಗ್ಯ ಕೇಂದ್ರದ ಅಡಳಿತ ವೈದ್ಯಾಧಿಕಾರಿ ಡಾ. ತಿಮ್ಮೇಗೌಡ ಮನವಿ ಮಾಡಿದರು.