ಒಂದೇ ಸ್ಥಳದಲ್ಲಿ ಬೋನು ಇರಿಸುವ ಬದಲು ಕಾಲನಿಯ ವಿವಿಧ ಪ್ರದೇಶಗಳಲ್ಲಿ ಬೋನುಗಳನ್ನು ಅಳವಡಿಸಿ ಹಂತ ಹಂತವಾಗಿ ಕೋತಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ದೂರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು
ಕಂಪ್ಲಿ: ಪಟ್ಟಣದ 21ನೇ ವಾರ್ಡ್‌ನ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 25ಕ್ಕೂ ಹೆಚ್ಚು ಕೆಂಪು ಹಾಗೂ ಕರಿ ಕೋತಿಗಳು ಸೆರೆಯಾಗಿವೆ.
ಕಾಲನಿಯಲ್ಲಿ ಕೆಂಪು ಮತ್ತು ಕರಿ ಕೋತಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಗಳ ಬಳಿ ನುಗ್ಗುವುದು, ಆಹಾರ ಪದಾರ್ಥ ಹೊತ್ತೊಯ್ಯುವುದು ಸೇರಿದಂತೆ ಕೋತಿಗಳ ದಾಂಧಲೆಯಿಂದ ಜನರು ಬೇಸತ್ತಿದ್ದಾರೆ. ಈ ಹಿನ್ನೆಲೆ ಕೋತಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ನಿವಾಸಿಗಳು ಹಾಗೂ ರೈತ ಸಂಘದವರು ಒತ್ತಾಯಿಸಿದ್ದರು.ರೈತ ಸಂಘದ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಕೋತಿಗಳ ಹಾವಳಿ ಮಿತಿ ಮೀರಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಪುರಸಭೆಯ ಸಹಕಾರದೊಂದಿಗೆ ಅರಣ್ಯ ಇಲಾಖೆ ಬೋನು ಅಳವಡಿಸಿದ್ದು, 25ಕ್ಕೂ ಹೆಚ್ಚು ಕೋತಿಗಳು ಸೆರೆಯಾಗಿವೆ. ಇನ್ನೂ ಸುಮಾರು 150ರಷ್ಟು ಕೆಂಪು ಮತ್ತು ಕರಿ ಕೋತಿಗಳು ವಿವಿಧೆಡೆ ಸಂಚರಿಸುತ್ತಿದ್ದು, ಒಂದೇ ಸ್ಥಳದಲ್ಲಿ ಬೋನು ಇರಿಸುವ ಬದಲು ಕಾಲನಿಯ ವಿವಿಧ ಪ್ರದೇಶಗಳಲ್ಲಿ ಬೋನುಗಳನ್ನು ಅಳವಡಿಸಿ ಹಂತ ಹಂತವಾಗಿ ಕೋತಿಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ದೂರದ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಕೋತಿಗಳ ಹಾವಳಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ಕೋತಿಗಳ ಸಂಖ್ಯೆ ನಿಯಂತ್ರಣಕ್ಕೆ ಬರುವವರೆಗೆ ಕಾರ್ಯಾಚರಣೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಆರೋಗ್ಯ ನಿರೀಕ್ಷಕ ಪ್ರಕಾಶಬಾಬು, ಹೊಸಪೇಟೆ ಪ್ರಾದೇಶಿಕ ಅರಣ್ಯ ಅಧಿಕಾರಿ ವೀರೇಶ್, ಅರಣ್ಯ ವೀಕ್ಷಕ ವೀರೇಶ್, ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.