4 ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮ ದೇವಿ ದರ್ಶನ

| Published : Dec 16 2024, 12:47 AM IST

ಸಾರಾಂಶ

ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಭಾನುವಾರ 4 ಲಕ್ಷಕ್ಕೂ ಅಧಿಕ ಜನ ಭಕ್ತರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಕನ್ನಡಪ್ರಭ ವಾರ್ತೆ ಮುನಿರಾಬಾದ್‌

ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಭಾನುವಾರ 4 ಲಕ್ಷಕ್ಕೂ ಅಧಿಕ ಜನ ಭಕ್ತರು ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಚಳಿ ಲೆಕ್ಕಿಸದ ಭಕ್ತರು:

ಶನಿವಾರ ರಾತ್ರಿ 50 ಸಾವಿರಕ್ಕೂ ಅಧಿಕ ಜನ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಮುಂದೆ ಇರುವ ತಂಗುದಾಣದಲ್ಲಿ ರಾತ್ರಿ ಬೀಡು ಬಿಟ್ಟಿದ್ದರು.

ಶನಿವಾರ ರಾತ್ರಿಯ ತಾಪಮಾನ 14 ಡಿಗ್ರಿ ತಲುಪಿತು. ಆದನ್ನು ಲೆಕ್ಕಿಸದೇ ಭಕ್ತರು ರಾತ್ರಿ ಚಳಿಯಲ್ಲಿ ತಂಗುದಾಣದಲ್ಲಿ ಕಳೆದರು. ಬೆಳಗ್ಗೆ 4 ಗಂಟೆಯಿಂದ ಚುಮು ಚುಮು ಚಳಿಯನ್ನು ಲೆಕ್ಕಿಸದೇ ಅಮ್ಮನವರ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತರು. ದೇವಸ್ಥಾನ ಬಾಗಿಲು ತೆಗೆಯುತ್ತಿದ್ದಂತೆ ಅಮ್ಮನವರ ದರ್ಶನ ಪಡೆಯಲು ಪ್ರಾರಂಭಿಸಿದರು. ಬೆಳಗ್ಗೆ 12 ಗಂಟೆ ವರೆಗೆ 2 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಅಮ್ಮನವರ ದರ್ಶನ ಪಡೆದು ತಮ್ಮ ತಮ್ಮ ಊರುಗಳಿಗೆ ಮರಳಿದರು. ಮಧ್ಯಾಹ್ನ 3 ಗಂಟೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿತು. ಸಂಜೆಯ ವೇಳೆಗೆ ಭಕ್ತರ ಸಂಖ್ಯೆ 4 ಲಕ್ಷ ದಾಟಿತು.

ಭಾರಿ ಟ್ರಾಫಿಕ್ ಜಾಮ್:

ಹಿಟ್ನಾಳದಿಂದ ಹುಲಿಗಿ ರಸ್ತೆ ಹಾಗೂ ಹೊಸಪೇಟೆಯಿಂದ ಹುಲಿಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿತು. ಇತ್ತೀಚಿನ ದಿನಗಳಲ್ಲಿ ಕೊಪ್ಪಳ, ಗದಗ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ಹಾಗೂ ಕುಷ್ಟಗಿ, ಬಾಗಲಕೋಟೆ ಮತ್ತು ವಿಜಯಪುರ ಕಡೆಯಿಂದ ಬರುವ ಭಕ್ತರು ಹಿಟ್ನಾಳ ಹುಲಿಗಿ ಮಾರ್ಗದ ಮುಖಾಂತರ ಹುಲಿಗಿ ಗ್ರಾಮಕ್ಕೆ ಆಗಮಿಸುತ್ತಿದ್ದು, ಈ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್‌ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಬಂದಿದೆ. ಈ ಮಾರ್ಗ ತುಂಬಾ ಇಕ್ಕಟ್ಟಾಗಿದೆ. ಇದರ ಅಗಲೀಕರಣದಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸಬಹುದು. ಹಿಟ್ನಾಳ ಹುಲಿಗಿ ರಸ್ತೆಯನ್ನು ಗವಿಮಠದ ಮುಂಭಾಗದಿಂದ ಹುಲಿಗೆಮ್ಮ ದೇವಸ್ಥಾನದ ನದಿ ದಂಡೆ ವರೆಗೆ ಅಗಲೀಕರಣ ಮಾಡಬೇಕು ಎಂಬ ಕೂಗು ಭಕ್ತರಿಂದ ಕೇಳಿ ಬರುತ್ತಿದೆ. ಹೀಗೆ ಮಾಡುವುದರಿಂದ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ದೇವಸ್ಥಾನದ ನದಿ ತೀರದಲ್ಲಿ ಪಾರ್ಕಿಂಗ್‌ ಮಾಡಲು ಅನುಕೂಲವಾಗುತ್ತದೆ ಹಾಗೂ ಸಮಯದ ಉಳಿತಾಯವು ಆಗುತ್ತದೆ. ಈ ನಿಟ್ಟಿನಲ್ಲಿ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವು ತ್ವರಿತಗತಿಯಲ್ಲಿ ಸಮಸ್ಯೆಗೆ ಸ್ಪಂದಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.