ವಸತಿ ಇಲಾಖೆಯಿಂದ ಫಲಾನುಭವಿ ಆಯ್ಕೆ ಮಾಡಲಾಗಿದ್ದು, ಹುಬ್ಬಳ್ಳಿಯಲ್ಲಿ 40 ಸಾವಿರಕ್ಕೂ ಹೆಚ್ಚು ಮನೆಗಳನ್ನು ಜ. 24ರಂದು ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ.
ಧಾರವಾಡ:
ಹುಬ್ಬಳ್ಳಿಯಲ್ಲಿ 40 ಸಾವಿರಕ್ಕೂ ಹೆಚ್ಚು ಮನೆಗಳನ್ನು ಜ. 24ರಂದು ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಇಲಾಖೆಯಿಂದ ಫಲಾನುಭವಿ ಆಯ್ಕೆ ಮಾಡಲಾಗಿದ್ದು, ರಾಜ್ಯ ಸರ್ಕಾರದಿಂದ ಉಚಿತವಾಗಿ ಮನೆ ನೀಡುತ್ತಿದ್ದೇವೆ. ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು ಆಗಮಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರು ನವೆಂಬರ್ ಕ್ರಾಂತಿ ಅಂದರು. ನವೆಂಬರ್, ಡಿಸೆಂಬರ್ ಮುಗೀತು. ಅವರಿಗೆ ವಾಂತಿ-ಭೇದಿ ಶುರುವಾಗಿದೆ. ಯಾವ ಕ್ರಾಂತಿ ಇಲ್ಲ. ಮತ್ತೆ ಸಂಕ್ರಮಣ ಸಹ ಮುಗಿದಿದೆ. ಇನ್ನು ಯುಗಾದಿ ಬರಲಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.ಮುಖ್ಯಮಂತ್ರಿ ಕುರ್ಚಿ ಮೇಲೆ ಸಿದ್ದರಾಮಯ್ಯ ಅವರು ಕೂತಿದ್ದು ಕುರ್ಚಿ ಕಾಲಿ ಇಲ್ಲ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕಾದರೆ ನಮ್ಮ ನಿಮ್ಮಿಂದ ಸಾಧ್ಯವಿಲ್ಲ. ಹೈಕಮಾಂಡ್‌ನಿಂದ ಮಾತ್ರ ಸಾಧ್ಯ ಎಂದ ಅವರು, ವರ್ಷಕ್ಕೊಮ್ಮೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿದೆ. 2008ರಿಂದ 2013ರ ವರೆಗೆ ಮೂರು ಮುಖ್ಯಮಂತ್ರಿ ಬದಲಾವಣೆ ಮಾಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಬಿಜೆಪಿಗೆ ಜನರು ಯಾವತ್ತು ಬಹುಮತ ಕೊಟ್ಟಿಲ್ಲ. ಬರೀ ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಆಗಾಗ ಹೋಗುತ್ತಾರೆ. ಅದರಲ್ಲಿ ಏನು ವಿಶೇಷವಿಲ್ಲವೆಂದು ಪ್ರಶ್ನಿಯೊಂದಕ್ಕೆ ಉತ್ತರಿಸಿದರು.