ತುಂಬಿ ಬರುವ ಬಸ್‌ಗಳು: ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

| Published : Jul 27 2024, 12:48 AM IST

ಸಾರಾಂಶ

ಕೂಡ್ಲಿಗಿ ಡಿಪೋ ವ್ಯವಸ್ಥಾಪಕರು ಹೊಸಹಳ್ಳಿಯಿಂದ ಕೂಡ್ಲಿಗಿಗೆ ಶಾಲಾ ಅವಧಿಯಲ್ಲಿ ಬೆಳಿಗ್ಗೆ ಪ್ರತ್ತೇಕ ಬಸ್ ಬಿಡುವುದಾಗಿ ಹೇಳಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ಕೂಡ್ಲಿಗಿ: ತಾಲೂಕಿನ ಅಮಲಾಪುರ, ಕ್ಯಾಸನಕೆರೆಯಂತಹ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇದ್ದರೂ ಇಲ್ಲಿಯ ವಿದ್ಯಾರ್ಥಿಗಳಿಗೆ ಬಸ್ ಸಿಗದಿದ್ದರಿಂದ ತುಂಬಿ ಬಂದ ಬಸ್ ತಡೆದು ವಿದ್ಯಾರ್ಥಿಗಳು ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸಿದರು. ಹೊಸಹಳ್ಳಿಯಿಂದ ಕೂಡ್ಲಿಗಿ ಕಡೆಗೆ ಬರುವ ಕೂಡ್ಲಿಗಿ ಡಿಪೋದ ಬೆಂಗಳೂರು-ಹೊಸಪೇಟೆ ಬಸ್‌ಗಳು ದೂರದಿಂದ ಬರುತ್ತಿರುವುದರಿಂದ ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೂ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಇವರು ಹೆದ್ದಾರಿಯಿಂದ ಸರ್ವಿಸ್ ರಸ್ತೆಯಿಂದ ಅಮಲಾಪುರ ಗ್ರಾಮಕ್ಕೆ ಬಂದರೂ ಇಲ್ಲಿಯ ಅಸಂಖ್ಯಾತ ವಿದ್ಯಾರ್ಥಿಗಳಿಗೆ ನಿಲ್ಲಲು ಸಹ ಬಸ್‌ನಲ್ಲಿ ಜಾಗ ಇರುವುದಿಲ್ಲ. ಇಲ್ಲಿಯ ವಿದ್ಯಾರ್ಥಿಗಳು ಬಸ್ ಮಿಸ್ ಮಾಡಿಕೊಂಡು ಶಾಲಾ ಕಾಲೇಜಿಗೆ ರಜೆ ಹಾಕುವ ಪರಿಸ್ಥಿತಿ ಬಂದಿದೆ. ಇದರಿಂದ ನೊಂದ ವಿದ್ಯಾರ್ಥಿಗಳು ಶುಕ್ರವಾರ ಗ್ರಾಮಕ್ಕೆ ಬಂದ ಕೂಡ್ಲಿಗಿ ಡಿಪೋ ಬಸ್ ತಡೆದು ಶಾಂತಿಯುತ ಪ್ರತಿಭಟನೆ ನಡೆಸಿದರು.

ಕೂಡ್ಲಿಗಿ ಡಿಪೋ ವ್ಯವಸ್ಥಾಪಕರು ಹೊಸಹಳ್ಳಿಯಿಂದ ಕೂಡ್ಲಿಗಿಗೆ ಶಾಲಾ ಅವಧಿಯಲ್ಲಿ ಬೆಳಿಗ್ಗೆ ಪ್ರತ್ತೇಕ ಬಸ್ ಬಿಡುವುದಾಗಿ ಹೇಳಿದ್ದರಿಂದ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.

ನಮ್ಮೂರು ರಾ.ಹೆ.50ರಲ್ಲಿಯೇ ಇದ್ದರೂ ನಮ್ಮೂರು ಸೇರಿದಂತೆ ಸುತ್ತಮುತ್ತ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ಗಂಟೆಯಿಂದ 10 ಗಂಟೆಯವರೆಗೂ ಬಸ್ ಊರೊಳಗೆ ಬಂದರೂ ನಿಲ್ಲಲು ಜಾಗ ಇರುವುದಿಲ್ಲ. ಪ್ರತ್ಯೇಕ ಬಸ್ ಬಿಡುವಂತೆ ಒತ್ತಾಯಿಸಿದೆವು. ಇದಕ್ಕೆ ಡಿಪೋ ಮ್ಯಾನೇಜರ್ ಸ್ಪಂದಿಸಿದ್ದಾರೆ ಎಂದು ಅಮಲಾಪುರ ಗ್ರಾಮದ ಹಳ್ಳೇರು ಶರಣಪ್ಪ ಹೇಳಿದ್ದಾರೆ.

ಅಮಲಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಬಂದರೂ ಸೀಟು ಸಿಗದಿರುವುದು ಸಮಸ್ಯೆ ಆಗಿರುವುದು ನಿಜ. ಹೊಸಹಳ್ಳಿಯಿಂದ ಇಂದಿನಿಂದ ಕೂಡ್ಲಿಗಿಗೆ ಬೆಳಿಗ್ಗೆ 8-45ಕ್ಕೆ ಬಸ್ ಬಿಡಲಿದ್ದು, ಹೆದ್ದಾರಿಗೆ ಹೊಂದಿಕೊಂಡಂತಿರುವ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಈಶಾನ್ಯ ಸಾರಿಗೆ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪ.