ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ನಾವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಾಲೂಕಿನಲ್ಲಿ ೬ನೇ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಇದೀಗ ನುಡಿದಂತೆ ನಡೆದು ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ ಕುಟುಂಬಗಳಿಗೆ ಮನೆ ಮಾಲಿಕತ್ವ ದೊರಕಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ನಾವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ತಾಲೂಕಿನಲ್ಲಿ ೬ನೇ ಗ್ಯಾರಂಟಿ ಘೋಷಣೆ ಮಾಡಿದ್ದೆವು. ಇದೀಗ ನುಡಿದಂತೆ ನಡೆದು ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ ಕುಟುಂಬಗಳಿಗೆ ಮನೆ ಮಾಲಿಕತ್ವ ದೊರಕಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಭಾನುವಾರ ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ನಡೆದ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ದಾಖಲೆಗಳಿಲ್ಲದೇ ೧೩ ಸಾವಿರಕ್ಕೂ ಹೆಚ್ಚು ಕುಟುಂಬಗಳು ತಾಲೂಕಿನಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ಅತಂತ್ರವಾಗಿ ವಾಸಿಸುತ್ತಿವೆ. ಇಂಥ ಕುಟುಂಬಗಳಿಗೆ ಶಾಶ್ವತ ಮನೆ ಮಾಲಿಕತ್ವದ ಭರವಸೆ ನೀಡಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಾಲಿಕತ್ವ ದೊರಕಿಸುವ ಕಾರ್ಯ ಆರಂಭಿಸಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಕಾರಣದಿಂದ ಈ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಿದೆ ಎಂದರು. ಹಕ್ಕುಪತ್ರ ವಿತರಿಸುವ ಕಾರ್ಯದಲ್ಲಿ ವಿಜಯನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, ಹಾವೇರಿ ಜಿಲ್ಲೆ ೨ನೇ ಸ್ಥಾನದಲ್ಲಿದೆ. ಹಾನಗಲ್ ತಾಲೂಕು ಇಡೀ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ಅತೀ ಹೆಚ್ಚು ಸಂಖ್ಯೆಯ ಕುಟುಂಬಗಳಿಗೆ ಅನುಕೂಲವಾಗುತ್ತಿರುವುದು ಹೆಚ್ಚು ಸಂತೋಷಕ್ಕೆ ಕಾರಣವಾಗಿದೆ. ಕಳೆದ ವರ್ಷ ಅಕ್ಕಿಆಲೂರಿಗೆ ಸಿಎಂ, ಡಿಸಿಎಂ ಸೇರಿದಂತೆ ಹಲವು ಸಚಿವರು ಆಗಮಿಸಿದ್ದ ಸಂದರ್ಭದಲ್ಲಿ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದನೆ ಸಿಕ್ಕಿದ್ದು, ನರೇಗಲ್, ಕೂಸನೂರು ಏತ ನೀರಾವರಿ ಯೋಜನೆ ೨೨೦ ಕೋಟಿ ರು. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿದೆ. ರಸ್ತೆಗಳ ಅಭಿವೃದ್ಧಿಗೆ ೫೦ ಕೋಟಿ ರು., ಧರ್ಮಾ ಕಾಲುವೆ ಹೂಳೆತ್ತಲು ೫೦ ಕೋಟಿ ಅನುದಾನ ಸಿಕ್ಕಿದೆ. ಹಲವು ವಿದ್ಯುತ್ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ಲಭಿಸಿದೆ. ಅನೇಕ ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ತಿಳವಳ್ಳಿಗೆ ಪೊಲೀಸ್ ಠಾಣೆ ಮಂಜೂರಾಗಿದೆ. ರಾಜ್ಯ ಸರ್ಕಾರ ಸಾರ್ಥಕ ಸಾವಿರ ದಿನಗಳ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಫೆ. ೧೪ ರಂದು ಹಾವೇರಿಯಲ್ಲಿ ನಡೆಯಲಿರುವ ಸಮರ್ಪಣಾ ಸಮಾವೇಶದಲ್ಲಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸೋಣ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ ಇದ್ದರು.ಕಂದಾಯ, ಆರ್‌ಡಿಪಿಆರ್, ಸರ್ವೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮದಿಂದ ಹೆಚ್ಚಿನ ಸಂಖ್ಯೆಯ ಕುಟುಂಬಗಳಿಗೆ ಹಾನಗಲ್ ತಾಲೂಕಿನಲ್ಲಿ ಮನೆಯ ಮಾಲಿಕತ್ವ ಸಿಗುತ್ತಿದೆ. ರಜಾದಿನಗಳಲ್ಲಿಯೂ ಕೆಲಸ ನಿರ್ವಹಿಸಿ ಸಾವಿರ ಸಾವಿರ ಸಂಖ್ಯೆಯ ಕುಟುಂಬಗಳಲ್ಲಿ ಮಂದಹಾಸ ಮೂಡಿಸಿ ಇತಿಹಾಸ ಸೃಷ್ಟಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.