ಮೌಢ್ಯ ತೊಲಗದೆ ಸಮಾಜ ಉದ್ಧಾರವಾಗದು

| Published : Dec 31 2024, 01:01 AM IST

ಸಾರಾಂಶ

ಭಾರತದ ಬಹುತ್ವದ ಸಮಾಜ. ಈ ಸಮಾಜದಲ್ಲಿ ಮೌಢ್ಯವನ್ನು ತೊಲಗಿಸಿ ಸರಿಸಮಾನತೆಯನ್ನು ತರಬೇಕು

ಕನ್ನಡಪ್ರಭ ವಾರ್ತೆ ಮೈಸೂರುಮೌಢ್ಯವನ್ನು ತೊಲಗಿಸದೇ ಸಮಾಜದ ಉದ್ಧಾರ ಸಾಧ್ಯವಾಗುವುದಿಲ್ಲ ಎಂದು ನಿವೃತ್ತ ಪ್ರಾಂಶುಪಾಲ, ಪ್ರಗತಿಪರ ಚಿಂತಕ ಪ್ರೊ.ಕೆ. ಕಾಳಚನ್ನೇಗೌಡ ತಿಳಿಸಿದರು.ಜೆ.ಪಿ. ನಗರದಲ್ಲಿರುವ ಪುಟ್ಟರಾಜು ಗವಾಯಿ ಕ್ರೀಡಾಂಗಣದಲ್ಲಿ ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಬಹುತ್ವದ ಸಮಾಜ. ಈ ಸಮಾಜದಲ್ಲಿ ಮೌಢ್ಯವನ್ನು ತೊಲಗಿಸಿ ಸರಿಸಮಾನತೆಯನ್ನು ತರಬೇಕು. ವೈಜ್ಞಾನಿಕ ಮನೋಭಾವದೊಂದಿಗೆ, ಪ್ರಗತಿಪರ ಚಿಂತನೆಯೊಂದಿಗೆ, ಸರಿ ಸಮಾನತೆಯಿಂದ ಬದುಕಬೇಕೆಂದು ಕುವೆಂಪು ರವರ ಆಶಯವಾಗಿತ್ತು. ಆದರೆ, ಇಂದು ಕುವೆಂಪು ಆಶಯ ನನಸಾಗದೇ ಬರಿ ಕನಸಾಗಿ ಉಳಿದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.ಆಡಂಬರದ ತೋರಿಕೆಯ ಜೀವನಕ್ಕೆ ಕಡಿವಾಣ ಹಾಕಿ ಮಂತ್ರ ಮಾಂಗಲ್ಯದ ಮೂಲಕ ಜನರನ್ನು ಸಾಮರಸ್ಯ ಜೀವನಕ್ಕೆ ಬೆಂಬಲಿಸಿದವರು ಕುವೆಂಪು. ಕರ್ನಾಟಕದ ಏಕೀಕರಣದಲ್ಲಿ ಪ್ರಮುಖವಾಗಿ ನಿಂತು ಕನ್ನಡ ಭಾಷೆ, ನೆಲ ಜಲ ಸುಭದ್ರವಾಗಿ ನಿಲ್ಲಲು ನಾಂದಿ ಹಾಡಿದವರು ಕುವೆಂಪು. ಅವರ ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಅವರು ಕರೆ ನೀಡಿದರು.ಪ್ರಸ್ತುತ ದಿನಗಳಲ್ಲಿ ಧರ್ಮ ಹಾಗೂ ರಾಜಕಾರಣ ಹೊಂದಿಕೆಯಾಗಿರುವುದು ದುರಂತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಕಾಣಬೇಕೆ ಹೊರತು ಜಾತಿ, ವರ್ಗಗಳಿಂದಲ್ಲ. ಅಧಿಕಾರದ ಆಸೆಗಾಗಿ, ಮತಗಳ ಬೇಟೆಗಾಗಿ ಇಂದಿನ ರಾಜಕಾರಣಿಗಳು ಜಾತಿಯನ್ನು ವೈಭವೀಕರಿಸುತ್ತಿರುವುದು ಅಪಾಯ ಸೂಚನೆಯಾಗಿದೆ. ಇಂತಹ ಅಪಾಯದ ಸೂಚನೆಗಳು ನಿಲ್ಲಬೇಕು. ಜಾತಿ- ಮತ, ಮೇಲು-ಕೀಳು ಹೋಗಲಾಡಿಸಿ ಸಂಪೂರ್ಣವಾಗಿ ದೇಶ ಉದ್ಧಾರವಾಗುವಲ್ಲಿ ಪ್ರಯತ್ನಿಸಬೇಕು ಎಂದು ಅವರು ಳಿಸಿದರು.ಇದೇ ವೇಳೆ ಸಂಘದ ದಿನಚರಿಯನ್ನು ಬಿಡುಗಡೆಗೊಳಿಸಿ ಸದಸ್ಯರಿಗೆ ವಿತರಿಸಲಾಯಿತು. ನಂತರ ಹಿರಿಯ ಕಲಾವಿದೆ ಶಶಿಕಲಾ ಚಂದ್ರಶೇಖರ್ ಅವರು ಕುವೆಂಪು ಗೀತಗಾಯನ ಕಾರ್ಯಕ್ರಮ ನೆರವೇರಿಸಿಕೊಟ್ಟರು.ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಉಪನ್ಯಾಸಕ ರಾಜೇಂದ್ರಪ್ರಸಾದ್, ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣ, ಉಪಾಧ್ಯಕ್ಷ ಜಯರಾಂ, ನಿರ್ದೇಶಕ ಪ್ರೊ.ಬಿ. ಕೆಂಪರಾಜು ಇದ್ದರು. ಗಾಯಕ ಪ್ರಕಾಶ್ ಮತ್ತು ತಂಡ ಪ್ರಾರ್ಥಿಸಿದರು. ಜಯರಾಂ ನಿರೂಪಿಸಿದರು.