15ಕೆಆರ್ ಎಂಎನ್ 6.ಜೆಪಿಜಿಜಾನಪದ ಕಲಾ ದರ್ಶನ ಪ್ಯಾಕೇಜ್ ಟೂರ್ ನ ಲೋಗೋ | Kannada Prabha
Image Credit: KP
ರಾಮನಗರ: ಜಾನಪದ ಸಂಸ್ಕೃತಿ ಹಾಗೂ ಕಲೆಗಳ ಸಂಗ್ರಹಾಲಯವಾದ ರಾಮನಗರದ ಜಾನಪದ ಲೋಕದತ್ತ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು "ಜಾನಪದ ಕಲಾ ದರ್ಶನ " ಹೆಸರಿನಲ್ಲಿ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಜಾರಿ ಮಾಡಿದೆ.
ರಾಮನಗರ: ಜಾನಪದ ಸಂಸ್ಕೃತಿ ಹಾಗೂ ಕಲೆಗಳ ಸಂಗ್ರಹಾಲಯವಾದ ರಾಮನಗರದ ಜಾನಪದ ಲೋಕದತ್ತ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು "ಜಾನಪದ ಕಲಾ ದರ್ಶನ " ಹೆಸರಿನಲ್ಲಿ ಪ್ಯಾಕೇಜ್ ಟೂರ್ ವ್ಯವಸ್ಥೆಯನ್ನು ಜಾರಿ ಮಾಡಿದೆ. ಪ್ರವಾಸೋದ್ಯ ಇಲಾಖೆ ರಚಿಸಿರುವ ಜಿಲ್ಲಾ ಪ್ರವಾಸೋದ್ಯಮ ಸರ್ಕ್ಯೂಟ್ ನಲ್ಲಿ ಜಾನಪದ ಲೋಕವನ್ನು ಸೇರಿಸುವ ಪ್ರಯತ್ನಗಳು ನಡೆದಿವೆ. ಅದರ ಜೊತೆಗೆ ಪ್ರಮುಖವಾಗಿ ಬೆಂಗಳೂರು ಪ್ರವಾಸಿಗರನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು "ಜಾನಪದ ಕಲಾ ದರ್ಶನ " ಟೂರ್ ಪ್ಯಾಕೇಜ್ ಅನ್ನು ರಚನೆ ಮಾಡಲಾಗಿದ್ದು, ಈ ಕಾರ್ಯದ ಯಶಸ್ಸಿಗಾಗಿ ಖಾಸಗಿ ಹೋಟೆಲ್ ಆಗಿರುವ ಕಾಮತ್ ಲೋಕರುಚಿ ಕೈಜೋಡಿಸಿದೆ. ಈ ಪ್ಯಾಕೇಜ್ ಟೂರ್ ಕರ್ನಾಟಕದ ಗ್ರಾಮೀಣ ಜೀವನ, ಸಂಪ್ರದಾಯಗಳನ್ನು ಅರಿಯುವ ಮತ್ತು ಪಾಕಪದ್ಧತಿಯ ಸಾರವನ್ನು ಸವಿಯುವ ರೋಮಾಂಚಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾಗಿದೆ. ಒಂದು ಪ್ಯಾಕೇಜ್ ನಲ್ಲಿ ಕನಿಷ್ಠ ಎಂದರೆ 30 ಮಂದಿ ಪ್ರವಾಸಿಗರು ಇರಬೇಕು. ಅವರೆಲ್ಲರು ಮುಂಗಡವಾಗಿಯೇ ಆನ್ ಲೈನ್ ಪೇಮೆಂಟ್ ಮಾಡಿ ಟಿಕೆಟ್ ಬುಕ್ ಮಾಡಬೇಕು. ಇದಕ್ಕಾಗಿ ಮಕ್ಕಳು ಮತ್ತು ಹಿರಿಯರಿಗಾಗಿ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಹೀಗೆ ಪ್ಯಾಕೇಜ್ ಟೂರ್ ನಲ್ಲಿ ಜಾನಪದ ಲೋಕಕ್ಕೆ ಆಗಮಿಸುವ ಪ್ರವಾಸಿಗರು ಜಾನಪದ ಪರಂಪರೆಯ ಶ್ರೀಮಂತಿಕೆ ಮತ್ತು ಇತಿಹಾಸವನ್ನು ಅನ್ವೇಷಿಸಿ, ಜಾನಪದ ಲೋಕದ ಸಾಂಸ್ಕೃತಿಕ ಮಹತ್ವವನ್ನು ತೋರಿಸುವ ಕಲಾಕೃತಿಗಳು ಮತ್ತು ಜಾನಪದ ಕಲೆಗಳ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ಕಾಮತ್ ಲೋಕರುಚಿಯಲ್ಲಿ ಹಳ್ಳಿ ಶೈಲಿಯಲ್ಲಿ ರುಚಿಕರವಾದ ವಿವಿಧ ಭಕ್ಷ್ಯಗಳ ಭೋಜನವನ್ನು ಸವಿಯಬಹುದಾಗಿದೆ. ಪ್ರವಾಸ ಕಾರ್ಯಕ್ರಮದ ವಿವರ: ಬೆಳಗ್ಗೆ 8.30ಕ್ಕೆ ಜಾನಪದ ಲೋಕಕ್ಕೆ ಪ್ರವಾಸಿಗರು ಆಗಮಿಸಿದ ತರುವಾಯ ವೇದಿಕೆ ಸಮಾರಂಭದ ಜೊತೆಗೆ ಉಪಾಹಾರ ವ್ಯವಸ್ಥೆ ಇರಲಿದೆ. ಜಾನಪದ ಲೋಕದ ಅನುಭವ ಪಡೆಯಲು ಆರಂಭಿಸಿದ ಮೇಲೆ ಪ್ರವಾಸಿಗರಿಗೆ ಕುಂಬಾರಿಕೆ ಕಾರ್ಯಾಗಾರ, ಜಾನಪದ ಸಂಗೀತ, ಗ್ರಾಮೀಣ ಆಟಗಳು ನಡೆಯಲಿವೆ. ಆನಂತರ ಮಧ್ಯಾಹ್ನ 1 ಗಂಟೆಗೆ ಜೋಳದ ರೊಟ್ಟಿಯ ಊಟದ ವ್ಯವಸ್ಥೆ ಇರಲಿದೆ. ಮಧ್ಯಾಹ್ನ 2 ಗಂಟೆಗೆ ಚನ್ನಪಟ್ಟಣದಲ್ಲಿನ ಬೊಂಬೆ ತಯಾರಿಕೆ ಕಾರ್ಖಾನೆ ಭೇಟಿ, ಚಿತ್ರಕಲಾ ಪ್ರದರ್ಶನ, ಶಿಲ್ಪಾ ಟ್ರಸ್ಟ್ ಆಟಿಕೆ ಅಂಗಡಿಗೆ ಭೇಟಿ ನೀಡಿದ ತರುವಾಯ ಗಿರಿ ಜನ ಲೋಕಕ್ಕೆ ಆಗಮಿಸುವುದು. ಡೊಳ್ಳು ಕುಣಿತ ಪ್ರದರ್ಶನದ ಬಳಿಕ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಈಗಾಗಲೇ ಒಂದು ತಂಡ ಪ್ಯಾಕೇಜ್ ಟೂರ್ ನಲ್ಲಿ ಬಂದು ತೆರಳಿದ್ದು, ಎರಡನೇ ತಂಡ ಅಕ್ಟೋಬರ್ 28ರಂದು ಆಗಮಿಸಲಿದೆ. ಈ ರೀತಿ ಜಾನಪದ ಲೋಕದತ್ತ ಬೆಂಗಳೂರಿನ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನಗಳು ನಡೆದಿವೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ "ಕನ್ನಡಪ್ರಭ "ಕ್ಕೆ ಪ್ರತಿಕ್ರಿಯೆ ನೀಡಿದರು. 15ಕೆಆರ್ ಎಂಎನ್ 6.ಜೆಪಿಜಿ ಜಾನಪದ ಕಲಾ ದರ್ಶನ ಪ್ಯಾಕೇಜ್ ಟೂರ್ನ ಲೋಗೋ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.