ಮದ್ದೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಕೆರೆ ಕಟ್ಟೆಗಳು ಮತ್ತು ಉಡುತೊರೆ ಹಳ್ಳ ಜಲಾಶಯಕ್ಕೆ ಕಾವೇರಿ ನೀರು ಹರಿಸಲು ಡಿಪಿಆರ್ ಮೂಲಕ ಹಣ ಬಿಡುಗಡೆಗೆ ಒತ್ತಾಯಿಸಿ ಹನ್ನೂರಿನಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ರೈತ ಸಂಘದ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು.
ಮಳವಳ್ಳಿ ಮಾರ್ಗವಾಗಿ ಪಟ್ಟಣದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಬಳಿಗೆ ಆಗಮಿಸಿದ ಪಾದಯಾತ್ರಿಗಳು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ನಂತರ ಪ್ರವಾಸಿ ಮಂದಿರದ ಬಳಿ ಭೋಜನ ಸವಿದರು.ಈ ವೇಳೆ ಮಾತನಾಡಿದ ಜಿಲ್ಲಾ ರೈತ ಮುಖಂಡ ಎ.ಎಲ್.ಕೆಂಪೂಗೌಡ, ಸರ್ಕಾರ ಕಾವೇರಿ ನದಿಯಿಂದ ಹನೂರು ಕೆರೆ ಕಟ್ಟೆಗಳಿಗೆ ನೀರು ಹರಿಸಲು ₹490 ಕೋಟಿ ಡಿಪಿಆರ್ ಹಣವನ್ನು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಿಸಿ ಹಣ ನೀಡಬೇಕು. ರೈತರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಜಿಲ್ಲಾ ರೈತರು ಕೂಡ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲೆ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ, ಹನೂರು ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ , ರೈತ ಮುಖಂಡರಾದ ಅಣ್ಣಯ್ಯ, ವಿಜಯಕುಮಾರ್ , ಲೋಕೇಶ್ ಗೌಡ, ರಾಜಮಣಿ, ಮಂಡ್ಯ ರೈತ ಮುಖಂಡರಾದ ಡಿ.ಎ.ಶಂಕರ್ , ಲಿಂಗಪ್ಪಾಜಿ, ಗೊಲ್ಲರದೊಡ್ಡಿ ಅಶೋಕ ಹಲವರು ಇದ್ದರು.