ಸಾರಾಂಶ
ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸಿರುವ ರೈತರಿಗೆ ಈ ವರೆಗೂ ಪರಿಹಾರದ ಹಣ ಕೈಸೇರಿಲ್ಲ. ಕೂಡಲೇ ಹಣ ಬಿಡುಗಡೆಗೊಳಿಸಿದರೆ ಬಿತ್ತನೇ ಬೀಜ, ಗೊಬ್ಬರ ಖರೀದಿಸಲು ಅನುಕೂಲವಾಗುತ್ತದೆ.
ಕಾರಟಗಿ:
ಅಕಾಲಿಕ ಆಲಿಕಲ್ಲು ಮಳೆಗೆ ಭತ್ತ ಬೆಳೆ ನಾಶವಾಗಿ ಎರಡ್ಮೂರು ತಿಂಗಳು ಕಳೆದಿದ್ದರೂ ಈ ವರೆಗೂ ರೈತರಿಗೆ ಬೆಳೆ ಹಾನಿ ಪರಿಹಾರ ಸಿಕ್ಕಿಲ್ಲ. ಕೂಡಲೇ ಪರಿಹಾರ ನೀಡಬೇಕು ಎಂದು ಬಾಧಿತ ಚಳ್ಳೂರು, ಚಳ್ಳೂರು ಕ್ಯಾಂಪ್‌ನ ರೈತರು ತಹಸೀಲ್ದಾರ್ ಎಂ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.ಅಕಾಲಿಕ ಮಳೆಯಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸಿರುವ ರೈತರಿಗೆ ಈ ವರೆಗೂ ಪರಿಹಾರದ ಹಣ ಕೈಸೇರಿಲ್ಲ. ಕೂಡಲೇ ಹಣ ಬಿಡುಗಡೆಗೊಳಿಸಿದರೆ ಬಿತ್ತನೇ ಬೀಜ, ಗೊಬ್ಬರ ಖರೀದಿಸಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ರೈತರಾದ ಎ. ಸುರೇಂದ್ರ ಹಾಗೂ ಎ. ವೆಂಕಟೇಶ ಮಾತನಾಡಿ, ಬೇಸಿಗೆ ಹಂಗಾಮಿನಲ್ಲಿ ಇನ್ನೇನು ಬೆಳೆ ಕೈಸೇರಿತು ಎನ್ನುವ ವೇಳೆ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿ, ಅಪಾರ ಪ್ರಮಾಣದ ನಾಶವಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಬೆಳೆ ಪರಿಶೀಲಿಸಿ, ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ, ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಈ ವರೆಗೂ ಪರಿಹಾರ ಬಂದಿಲ್ಲ ಎಂದರು.ಮಾಹಿತಿ ಹಕ್ಕು ವೇದಿಕೆ ಜಿಲ್ಲಾಧ್ಯಕ್ಷ ಶಿವನಾರಾಯಣ ಮಾತನಾಡಿ, ಸರ್ಕಾರಕ್ಕೆ ಬೆಳೆ ನಾಶದ ವರದಿ ಸಲ್ಲಿಸಿದರೂ ಪರಿಹಾರ ಏಕೆ ವಿಳಂಬವಾಗಿದೆ ಎಂದು ತಿಳಿಯುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಹಾರ ಧನ ನೀಡಿ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ರೈತರೊಂದಿಗೆ ಕಂದಾಯ ಇಲಾಖೆ ಕಚೇರಿ ಮುಂಚೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಅಂದಾಜು ೭೫೦೦ ಎಕರೆ ಭತ್ತದ ಬೆಳೆ ನಾಶವಾಗಿರುವ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಶೀಘ್ರ ಪರಿಹಾರ ರೈತರ ಖಾತೆ ಸೇರಲಿದೆ ಎಂದು ಭರವಸೆ ನಿಡಿದರು.ಈ ವೇಳೆ ಬಿ. ಶ್ರೀನಿವಾಸ, ಬಂಡಿ ರಾಘು, ಜಿ. ರಾಜು, ಕೆ. ವೆಂಕಟೇಶ, ಜೆ. ವೆಂಕಟರಾವ್ ಸೇರಿದಂತೆ ಇನ್ನಿತರರು ಇದ್ದರು.