ಸಾರಾಂಶ
ಮುಂಗಾರು ಹಂಗಾಮಿನ ಬೆಳೆ ಕೈಸೇರುವ ಹಂತದಲ್ಲಿ ವರುಣನ ವಕ್ರದೃಷ್ಠಿ ರೈತರ ಮೇಲೆ ಬೀರಿದೆ
ಕಾರಟಗಿ: ವಾಯುಭಾರ ಕುಸಿತದಿಂದ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿಮಿಶ್ರಿತ ಮಳೆಯಿಂದ ರೈತರ ಜಮೀನಿನಲ್ಲಿ ಕಟಾವಿಗೆ ಬಂದ ಭತ್ತ ನೆಲಕಚ್ಚಿದೆ.
ಪಟ್ಟಣದ ಪನ್ನಾಪೂರ ರಸ್ತೆಯಲ್ಲಿ ಸುಮಾರು ೧೫ ಎಕರೆ ಕಟಾವಿಗೆ ಬಂದ ಭತ್ತ ಮಕಾಡೆ ಮಲಗಿದೆ. ಏಕಾಏಕಿ ಗಾಳಿಯೊಂದಿಗೆ ಸುರಿದ ಮಳೆಯಿಂದ ರೈತರು ಚಿಂತೆಗೀಡಾಗಿದ್ದಾರೆ. ಮುಂಗಾರು ಹಂಗಾಮಿನ ಬೆಳೆ ಕೈಸೇರುವ ಹಂತದಲ್ಲಿ ವರುಣನ ವಕ್ರದೃಷ್ಠಿ ರೈತರ ಮೇಲೆ ಬೀರಿದೆ. ಕ್ರಷ್ಟ್ ಗೇಟ್ ದುರಸ್ಥಿ ಕಾರ್ಯ ನಿಮಿತ್ತ ಹಿಂಗಾರು ಬೆಳೆಗೆ ನೀರಿಲ್ಲ ಎಂದು ಸರ್ಕಾರ ಈಗಾಗಲೇ ಸಂದೇಶ ನೀಡಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಭತ್ತ ಸಂಪೂರ್ಣ ಕಟಾವಿಗೆ ಬರುವ ಸಮಯದಲ್ಲಿ ಅಕಾಲಿಕ ಮಳೆ ಸುರಿಯುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಸಂಜೆ ಸುಮಾರ ೪ ಗಂಟೆಯಿಂದ ೫ ಗಂಟೆ ಸಮಯದಲ್ಲಿ ಗಾಳಿ, ಗುಡುಗಿನೊಂದಿಗೆ ಜೋರಾಗಿ ಸುರಿದ ಮಳೆಯಿಂದ ದೀಪಾವಳಿ ಹಬ್ಬದ ವ್ಯಾಪಾರ ವಹಿವಾಟಿಗೆ ಬಂದ ಬಾಳೆಕಂಬ, ಹೂವು ಮಾರಾಟಗಾರರು ಕಂಗಾಲಾಗಿ ಹೋದರು. ಕಳೆದ ಕೆಲ ದಿನಗಳಿಂದ ಆಗೋಮ್ಮೆ ಈಗೋಮ್ಮೆ ತುಂತುರು ಮಳೆಯಾಗುತ್ತಿತ್ತು ಆದರೆ ಮಂಗಳವಾರ ಸಂಜೆ ಸುರಿದ ಮಳೆ ರೈತರನ್ನು ಅತಂಕಕ್ಕೀಡು ಮಾಡಿದೆ.ಕಳೆದ ಏಪ್ರೀಲ್‌ನಲ್ಲಿ ಸುರಿದ ಅಕಾಲಿಕ ಮಳೆಗೆ ಹಾನಿಗೊಂಡ ಬೆಳೆಗೆ ಇವರೆಗೂ ಸರ್ಕಾರ ಪರಿಹಾರ ಹಣ ನೀಡಿಲ್ಲ. ಆದರೂ ಸರ್ಕಾರ ರೈತರ ಕಡೆ ಗಮನವಹಿಸಿಲ್ಲ. ಪ್ರತಿ ಹಂಗಾಮಿನಲ್ಲಿ ಬೆಳೆಕೊಯ್ಲಿಗೆ ಬಂದಾಗ ಏನಾದರೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇನ್ನು ನದಿ ಪಾತ್ರದ ಕೆಲವು ರೈತರು ಈಗಾಗಲೇ ಭತ್ತ ಕಟಾವು ನಡೆಸಿದ್ದು, ಫಸಲು ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಪ್ರಕೃತಿ ವಿಕೋಪದಿಂದ ಒಂದಿಲ್ಲೊಂದು ತೊಂದರೆ ರೈತರು ಅನುಭವಿಸುತ್ತಲಿದ್ದೇವೆ. ಭತ್ತ ಕಟಾವು ಹಂತದ ಕೊನೆಯಲ್ಲಿ ಹೀಗೆ ಮಳೆಗೆ ಬೆಳೆ ಈಡಾದರೆ ರೈತರ ಪಾಡೇನು ಎಂದು ಪನ್ನಾಪೂರ ಕ್ರಾಸ್‌ನ ಕೆಲವು ರೈತರು ತಮ್ಮ ಅಳಲು ತೊಡಿಕೊಂಡರು.
ಮಂಗಳವಾರ ಬೆಳಗ್ಗೆಯಿಂದ ಮೋಡಕವಿದ ವಾತಾವರಣದೊಂದಿಗೆ ಆಗೋಮ್ಮೆ ಈಗೋಮ್ಮೆ ಬಂದ ಮಳೆ ನಂತರ ಸಂಜೆ ಮೋಡಕವಿದು ಕತ್ತಲಾದಂತಾಗಿ ಮಳೆ ಸುರಿದಿದ್ದರಿಂದ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರವಾಹನಗಳು ಸೇರಿದಂತೆ ಸಾರ್ವಜನಿಕರು ಕೆಲ ಸಮಯ ತೊಂದರೆ ಅನುಭವಿಸಿದರು.