ಭತ್ತ ಮಡಿ, ನಾಟಿಗೆ ಭದ್ರಾ ನಾಲೆಗೆ ನೀರು ಬಿಡಿ

| Published : Jul 21 2025, 12:00 AM IST

ಭತ್ತ ಮಡಿ, ನಾಟಿಗೆ ಭದ್ರಾ ನಾಲೆಗೆ ನೀರು ಬಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬತ್ತದ ಬೀಜ ಚೆಲ್ಲಿ, ಸಸಿ ಮಡಿ ಸಿದ್ಧಪಡಿಸಿಕೊಂಡು ನಾಟಿಗಾಗಿ ಭದ್ರಾ ನೀರಿಗಾಗಿ ಕಾಯುತ್ತಿದ್ದಾರೆ. ಜು.21ರಿಂದಲೇ ಭದ್ರಾ ಡ್ಯಾಂನಿಂದ ಭದ್ರಾ ಕಾಲುವೆಗಳಿಗೆ ನೀರು ಹರಿಸುವಂತೆ ಜಿಲ್ಲಾ ರೈತರ ಒಕ್ಕೂಟ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಬತ್ತದ ಬೀಜ ಚೆಲ್ಲಿ, ಸಸಿ ಮಡಿ ಸಿದ್ಧಪಡಿಸಿಕೊಂಡು ನಾಟಿಗಾಗಿ ಭದ್ರಾ ನೀರಿಗಾಗಿ ಕಾಯುತ್ತಿದ್ದಾರೆ. ಜು.21ರಿಂದಲೇ ಭದ್ರಾ ಡ್ಯಾಂನಿಂದ ಭದ್ರಾ ಕಾಲುವೆಗಳಿಗೆ ನೀರು ಹರಿಸುವಂತೆ ಜಿಲ್ಲಾ ರೈತರ ಒಕ್ಕೂಟ ಅಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪ್ರಸ್ತುತ 180 ಅಡಿ ನೀರಿನ ಸಂಗ್ರಹವಿದ್ದು, ಒಳಹರಿವು ಹೆಚ್ಚುತ್ತಿದೆ. ಆದರೆ, ಭದ್ರಾ ಬಲದಂಡೆ ನಾಲೆ ಸೀಳಿರುವುದರಿಂದ ನೀರು ಹರಿಸುವುದು ತಡವಾಗಿದೆ. ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸಿದ್ದಾಗಿ ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸುಳ್ಳು ಹೇಳಿ ರೈತರನ್ನು ಸಮಾಧಾನಪಡಿಸಿದ್ದರು. ಆದರೆ, ನಾಲೆ ಸೀಳಿ ಕೈಗೊಂಡ ಕಾಮಗಾರಿ ನಿಲ್ಲಲಿಲ್ಲ ಎಂದು ದೂರಿದ್ದಾರೆ.

ಭದ್ರಾ ಬಲದಂಡೆ ಕಾಲುವೆಯನ್ನು ಸೀಳಿದ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ ಜಿಲ್ಲಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದ ರೈತರ ನಿಯೋಗಕ್ಕೆ ಭರವಸೆ ನೀಡಿ, ಕಳಿಸಿದ್ದರು. ಆರೂ, ಸಿಎಂ ಆಗಲು ಹವಣಿಸುತ್ತಿರುವ ಡಿ.ಕೆ.ಶಿವಕುಮಾರ ಇತ್ತ ತಲೆ ಸಹ ಹಾಕಲಿಲ್ಲ ಎಂದು ಟೀಕಿಸಿದ್ದಾರೆ.

ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಶೇ.75ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶವಿದೆ. ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷರಾಗಿ ದಾವಣಗೆರೆ ಜಿಲ್ಲೆಯವರನ್ನೇ ನೇಮಕ ಮಾಡಬೇಕು. ದಾವಣಗೆರೆಯಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ಕಡ್ಡಾಯ ಆಗಬೇಕು. ಕದ್ದುಮುಚ್ಚಿ ರಾತ್ರೋರಾತ್ರಿ ನಾಲೆ ಕಾಮಗಾರಿ ಘಟನೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಮುಂದಿನ ದಿನಗಳಲ್ಲಿ ಭದ್ರಾ ಡ್ಯಾಂ ಬಫರ್ ಝೋನ್‌ನಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಸತೀಶ ಕೊಳೇನಹಳ್ಳಿ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

- - -

-20ಕೆಡಿವಿಡಿ8: ಬಿ.ಎಂ.ಸತೀಶ ಕೊಳೇನಹಳ್ಳಿ