ಭಾರಿ ಮಳೆಗೆ ನೆಲಕ್ಕುರಳಿದ ಭತ್ತ: ಕೊಳೆತ ಈರುಳ್ಳಿ

| Published : Oct 23 2024, 01:52 AM IST

ಸಾರಾಂಶ

ತಂಬ್ರಹಳ್ಳಿ ಹೋಬಳಿಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಒಕ್ಕಣೆಗೆ ಬಂದ ರೈತರ ಮೆಕ್ಕೆಜೋಳ, ಈರುಳ್ಳಿ, ಭತ್ತದ ಬೆಳೆಗಳು ನಷ್ಟಕ್ಕೆ ತುತ್ತಾಗಿವೆ.

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಹೋಬಳಿಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಒಕ್ಕಣೆಗೆ ಬಂದ ರೈತರ ಮೆಕ್ಕೆಜೋಳ, ಈರುಳ್ಳಿ, ಭತ್ತದ ಬೆಳೆಗಳು ನಷ್ಟಕ್ಕೆ ತುತ್ತಾಗಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಾಚಿಗೊಂಡನಹಳ್ಳಿ ಗ್ರಾಮದ ಕುರುಬರ ಮಂಜುನಾಥ ಎಂಬುವವರು ೯ ಎಕರೆಯಲ್ಲಿ ಬೆಳೆದ ಭತ್ತ ಕಟಾವಿನ ಹಂತಕ್ಕೆ ಬಂದಿದ್ದು, ಬಾರಿ ಮಳೆಯಿಂದಾಗಿ ಸಂಪೂರ್ಣ ನೆಲಕ್ಕಪ್ಪಳಿಸಿದೆ. ಇದೇ ಗ್ರಾಮದ ಎಲ್ಲಾಪುರ ಚನ್ನಬಸಪ್ಪ, ಕೆ. ಕೊಟ್ರಪ್ಪ, ಸಜ್ಜೆ ನಾಗರಾಜ, ಹೆಚ್. ಭರತೇಶ್, ಧನಂಜಯ, ಕೆ. ಆನಂದಪ್ಪ ಎಂಬುವವರ ಭತ್ತದ ಬೆಳೆ ನೆಲಕ್ಕೆ ಬಿದ್ದ ಪರಿಣಾಮ ಮಳೆಯ ನೀರು ಭತ್ತದ ಮೇಲೆ ಹರಿದಿದ್ದು, ಭತ್ತದ ಕಾಳು ಜೊಳ್ಳು ಆಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳಿದರು.

ತಾಲೂಕಿನ ಬನ್ನಿಗೋಳ, ಕಿತ್ನೂರು, ಮುತ್ಕೂರು ಗ್ರಾಮಗಳ ರೈತರ ಈರುಳ್ಳಿ ಹೊಲಗಳಿಗೆ ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜೇಂದ್ರ, ಕಂದಾಯ ಇಲಾಖೆಯ ಯಂಕಾರೆಡ್ಡಿ, ಮಂಜುಳಾ ಜಂಟಿ ಸಮೀಕ್ಷೆ ನಡೆಸಿ ಈರುಳ್ಳಿ ಬೆಳೆ ನಷ್ಟವನ್ನು ವೀಕ್ಷಿಸಿದರು. ತಾಲೂಕಿನ ಈರುಳ್ಳಿ ಬೆಳೆನಷ್ಟದ ಮಾಹಿತಿಯನ್ನು ಸಂಗ್ರಹಿಸಿ, ಪರಿಹಾರಕ್ಕೆ ಆಗ್ರಹಿಸಿ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜೇಂದ್ರ ತಿಳಿಸಿದರು.

ಬಾರಿ ಮಳೆಯಿಂದಾಗಿ ಮಾಲವಿ ಜಲಾಶಯಕ್ಕೆ ಬಾರಿ ನೀರು ಹರಿದು ಬಂದಿದ್ದು, ೧೯ ಅಡಿಯಷ್ಟು ನೀರು ಸಂಗ್ರಹವಾಗಿದೆ. ತಂಬ್ರಹಳ್ಳಿ ಹೋಬಳಿಯಲ್ಲಿ ಸೋಮವಾರ ರಾತ್ರಿ ೬೩.೪ ಮಿಮೀ ಮಳೆ ದಾಖಲಾಗಿದೆ.

ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಗಬಹುದೇ ಎಂಬುದನ್ನು ಕಾದುನೋಡಬೇಕಿದೆ.