ಸಾರಾಂಶ
ಧಾರವಾಡ:
ಇಲ್ಲಿಯ ರಂಗಾಯಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಮೂರು ದಿನಗಳ ಚಲನಚಿತ್ರೋತ್ಸವದ ಪೈಕಿ ಶುಕ್ರವಾರ, ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ವಿಠ್ಠಲ ಮಲೆಕುಡಿಯ ಜೀವನದ ನೈಜ ಕಥೆಯನ್ನು ಆಧರಿಸಿ ಮಂಸೋರೆ ನಿರ್ದೇಶನದಲ್ಲಿ ತೆರೆಗೆ ಬಂದ 19.20.21 ಚಿತ್ರ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆಗೆ ವ್ಯಕ್ತವಾಯಿತು.ಬುಡಕಟ್ಟು ಜನಾಂಗವನ್ನು ಅರಣ್ಯದಿಂದ ಹೊರ ಹಾಕುವ ಆಡಳಿತ ವ್ಯವಸ್ಥೆಯ ಭಾಗವಾಗಿ ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವ ಕಾಯ್ದೆ) ಅಡಿಯಲ್ಲಿ ಹಾಕಲಾದ ಪ್ರಕರಣದ ಸುತ್ತಲು ಈ ಚಿತ್ರ ನಡೆಯುತ್ತದೆ. ಇಡೀ ಚಿತ್ರ ಪಶ್ಚಿಮ ಘಟ್ಟಗಳ ಸುಂದರ ಪರಿಸರದ ಮಧ್ಯೆ ಸಾಗುತ್ತದೆ. ಯುಎಪಿಎ ಅಡಿಯಲ್ಲಿ ತನ್ನ ಹಾಗೂ ತನ್ನ ತಂದೆ ಮೇಲೆ ಹಾಕಲಾದ ಪ್ರಕರಣದ ನ್ಯಾಯಕ್ಕಾಗಿ ಒಂಬತ್ತು ವರ್ಷಗಳ ಹೋರಾಟದ ನಂತರ ಅಂತಿಮವಾಗಿ ಖುಲಾಸೆಗೊಂಡ ಯುವಕ ವಿಠ್ಠಲ್ ಅವರ ನೈಜ ಕಥೆ ಇದಾಗಿದೆ. ಚಲನಚಿತ್ರವು ಪಶ್ಚಿಮ ಘಟ್ಟಗಳಲ್ಲಿನ ವಿಠ್ಠಲ್ ಹಾಗೂ ಆತನ ಕುಟುಂಬ ಮತ್ತು ಆದಿವಾಸಿಗಳು ತಮ್ಮ ಭೂಮಿಯ ಹಕ್ಕು ಮತ್ತು ಜೀವನೋಪಾಯಕ್ಕಾಗಿ ನಡೆಸುತ್ತಿರುವ ನೋವಿನ ಹೋರಾಟವನ್ನು ನಿರ್ದೇಶಕರು ಎಳೆಎಳೆಯಾಗಿ ತೋರ್ಪಡಿಸಿದ್ದಾರೆ.
ನೋವಿನ ಕಥೆ:ಪೊಲೀಸರು ನಕ್ಸಲ್ ಚಟುವಟಿಕೆ ಹತ್ತಿಕುವ ನೆಪದಲ್ಲಿ ಆದಿವಾಸಿಗಳ ಮೇಲೆ ನಡೆಸುವ ದೌರ್ಜನ್ಯ, ಅವರನ್ನು ಒಕ್ಕಲೆಬ್ಬಿಸಲು ನಡೆಸುವ ಪ್ರಯತ್ನ ಹಾಗೂ ಕೊನೆಯದಾಗಿ ತಮ್ಮ ದೌರ್ಜನ್ಯವನ್ನು ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ತಿಳಿಸುವ ಮಂಜು (ವಿಠ್ಠಲ್) ಹಾಗೂ ಆತನ ತಂದೆ ಮೇಲೆ ಪ್ರಕರಣ ದಾಖಲಿಸಿ ತೊಂದರೆ ಕೊಡುವ ಚಿತ್ರಗಳು ಪ್ರೇಕ್ಷಕರನ್ನು ವ್ಯವಸ್ಥೆ ಮೇಲೆ ಸಿಟ್ಟು ಬರುವಂತೆ ಮಾಡುತ್ತವೆ. ನಕ್ಸಲ್ ಜೊತೆಗೆ ಯಾವುದೇ ನಂಟು ಇರದೇ ಇದ್ದರೂ ಉದ್ದೇಶಪೂರ್ವಕವಾಗಿ ಯುಎಪಿಎ ಪ್ರಕರಣದ ಮೂಲಕ ಮಂಜುವಿನ ವಿದ್ಯಾಭ್ಯಾಸ ಹತ್ತಿಕುವ ಪೊಲೀಸರು, ನ್ಯಾಯಾಲಯದ ಆದೇಶದ ಮೇರೆಗೆ ಪರೀಕ್ಷೆ ಬರೆಯಲು ಸಹ ತೊಂದರೆ ಮಾಡುತ್ತಾರೆ. ಇಷ್ಟಾಗಿಯೂ ಸ್ಥಳೀಯ ಪತ್ರರ್ತರು, ನ್ಯಾಯವಾದಿ ಹಾಗೂ ಹೋರಾಟಗಾರರ ಸಹಾಯದಿಂದ ಮಂಜು ಪರೀಕ್ಷೆ ಬರೆದು ಪಾಸಾಗಿ ಕೊನೆಗೆ ಒಂಭತ್ತು ವರ್ಷಗಳ ನಂತರ ಪ್ರಕರಣವನ್ನೇ ಗೆದ್ದು ಬರುತ್ತಾನೆ.
ತನ್ನ ಬುಡಕಟ್ಟು ಸಮುದಾಯದಲ್ಲಿ ಉನ್ನತ ವ್ಯಾಸಂಗವನ್ನು ಪ್ರವೇಶಿಸಲು ಮೊದಲಿಗನಾಗುವ ಮಂಜು, ತನ್ನ ಜನರು ಮತ್ತು ಅವರ ಸಾಂವಿಧಾನಿಕ ಹಕ್ಕುಗಳಿಗಾಗಿ ವ್ಯವಸ್ಥೆಯ ವಿರುದ್ಧ ಹೋರಾಡಿ ಕೊನೆಗೂ ಜಯ ಸಾಧಿಸುತ್ತಾನೆ. ಒಬ್ಬ ವ್ಯಕ್ತಿ ಸ್ವತಂತ್ರವಾಗಿ ಮಾತನಾಡಲು ಹಾಗೂ ಬದುಕಲು ಸಂವಿಧಾನವು ಆರ್ಟಿಕಲ್ 19, 20 ಹಾಗೂ 21 ನೀಡಿವೆ. ಆದರೆ, ವಿಠ್ಠಲನ ಪ್ರಕರಣದಲ್ಲಿ ಈ ಹಕ್ಕುಗಳು ಉಲ್ಲಂಘನೆಯಾಗಿರುತ್ತವೆ. ಇವುಗಳ ಆಧಾರದ ಮೇಲೆ ವಿಠ್ಠಲ ಜಯ ಸಾಧಿಸುತ್ತಾನೆ.ಚಿತ್ರ ಪ್ರದರ್ಶನ ನಂತರ ನಡೆದ ಸಂವಾದದಲ್ಲಿ ಚಿತ್ರಾಸಕ್ತರಾದ ಭೀಮಸೇನ, ಮಲ್ಲಿಕಾರ್ಜುನ ಚಿಕ್ಕಮಠ, ಡಾ. ಹೇಮಾ ಪಟ್ಟಣಶೆಟ್ಟಿ, ನ್ಯಾಯವಾದಿ ಕೆ.ಎಚ್. ಪಾಟೀಲ ಮತ್ತಿತರರು ಭಾಗವಹಿಸಿದ್ದರು. ಚಲನಚಿತ್ರಗಳು ಕೇವಲ ಮನರಂಜನೆ ನೀಡುವುದು ಮಾತ್ರವಲ್ಲದೇ ದೇಶದ ಸಂವಿಧಾನ ಹಾಗೂ ಸಂವಿಧಾನದ ಆಶಯಗಳನ್ನು ಜನರಿಗೆ ಹೀಗೂ ತಲುಪಿಸಬಹುದು ಎಂಬುದನ್ನು ಮಂಸೋರೆ ಅವರು ತಮ್ಮ ಚಿತ್ರತಂಡದೊಂದಿಗೆ ಅದ್ಭುತವಾಗಿ ಈ ಚಿತ್ರದಲ್ಲಿ ತೋರ್ಪಡಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಚಿತ್ರ ತಂಡದ ವೀರೇಂದ್ರ, ಮಲ್ಲಣ್ಣ, ಸಂತೋಷ ಹಾಗೂ ಮಂಜುವಿನ ತಂದೆಯಾಗಿ ನಟಿಸಿದ ಮಹಾದೇವ ಹಡಪದ ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಇದ್ದರು.