ಪಾಕಿಸ್ತಾನಕ್ಕೆ ಮೂರೇ ದಿನ ಯುದ್ಧ ಮಾಡುವ ಸಾಮರ್ಥ್ಯ: ನಿವೃತ್ತ ವಾಯು ಸೇನಾಧಿಕಾರಿ

| Published : May 01 2025, 12:46 AM IST

ಪಾಕಿಸ್ತಾನಕ್ಕೆ ಮೂರೇ ದಿನ ಯುದ್ಧ ಮಾಡುವ ಸಾಮರ್ಥ್ಯ: ನಿವೃತ್ತ ವಾಯು ಸೇನಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಬ್ರಾಹ್ಮಣರು ಹಿಂದೆ ಉಳಿದಿಲ್ಲ ಎಂದು ನಿವೃತ್ತ ವಾಯಸೇನಾ ಅಧಿಕಾರಿ ಅರವಿಂದ ಕುದ್ಕೋಳಿ ಹೇಳಿದರು. ಕದ್ರಿ ಮಂಜುನಾಥ ಕ್ಷೇತ್ರ ಆವರಣದ ಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಆಯೋಜಿಸಿದ ಯುಗಾದಿ ಸಂಭ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಸೇನೆಯಲ್ಲಿ ಬ್ರಾಹ್ಮಣರು ಹಿಂದುಳಿದಿಲ್ಲ: ಅರವಿಂದ ಕುದ್ಕೋಳಿ

ಕನ್ನಡಪ್ರಭ ವಾರ್ತೆ ಮಂಗಳೂರು

ಸೇನೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುವಲ್ಲಿ ಬ್ರಾಹ್ಮಣರು ಹಿಂದೆ ಉಳಿದಿಲ್ಲ. ನಾನು ಸೇನಾಧಿಕಾರಿಯಾಗಿ ಆಯ್ಕೆಯಾದ ಬ್ಯಾಚ್‌ನ 7 ಮಂದಿಯಲ್ಲಿ ಐವರು ಬ್ರಾಹ್ಮಣರೇ ಆಗಿದ್ದರು ಎಂದು ನಿವೃತ್ತ ವಾಯಸೇನಾ ಅಧಿಕಾರಿ ಅರವಿಂದ ಕುದ್ಕೋಳಿ ಹೇಳಿದರು.

ಕದ್ರಿ ಮಂಜುನಾಥ ಕ್ಷೇತ್ರ ಆವರಣದ ಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಆಯೋಜಿಸಿದ ಯುಗಾದಿ ಸಂಭ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಪಾಕಿಸ್ತಾನ ವಿರುದ್ಧ ಭಾರತ ಯುದ್ಧ ಮಾಡಿದರೆ ಅದಕ್ಕೆ ಬೇರೆ ದೇಶಗಳ ಬೆಂಬಲ ಸಿಗದೇ ಇದ್ದರೆ ಕೇವಲ ಮೂರೇ ದಿನದಲ್ಲಿ ಯುದ್ಧ ಮುಗಿಯುತ್ತದೆ ಎಂದರು.

ನಮಗೆ ದೇಶದ ವಿಚಾರ ಮಾತನಾಡುವಾಗಲೇ ರೋಮಾಂಚನವಾಗುತ್ತದೆ. ಆ ರೀತಿಯ ತರಬೇತಿ ನಮಗೆ ನೀಡಲಾಗುತ್ತದೆ. ಬೆಟಾಲಿಯನ್‌ ಕಾರ್ಯಾಚರಣೆ ನಡೆಸುವ ವೇಳೆ ಜೈ ಶ್ರೀರಾಮ್‌ ಎಂದು ಉದ್ಘೋಷಿಸುವಾಗ ವೈರಿಗಳ ಗುಂಡಿಗೆ ಸೀಳುವ ಧೈರ್ಯ ಶಕ್ತಿ ಸಂಚಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕದ್ರಿ ಕ್ಷೇತ್ರದ ತಂತ್ರಿ ವೇದಮೂರ್ತಿ ವಿಠ್ಠಲದಾಸ ತಂತ್ರಿ ಮಾತನಾಡಿ, ಬ್ರಾಹ್ಮಣರು ಶಾಸ್ತ್ರ ಅಧ್ಯಯನ ನಡೆಸಿದರೆ ಸಾಲದು, ಶಸ್ತ್ರಗಳ ಬಳಕೆಯೂ ಗೊತ್ತಿರಬೇಕು. ಮೂರು ವೇದಗಳಲ್ಲಿ ಶಾಸ್ತ್ರಗಳ ಅಧ್ಯಯನ ಇದ್ದರೆ, ಅಥರ್ವ ವೇದದಲ್ಲಿ ಶತ್ರು ಸಂಹಾರ ವಿಚಾರಗಳಿವೆ ಎಂದರು. ಸಮಾಜದಲ್ಲಿರುವ ಸಮಸ್ಯೆ, ಸಂದೇಹಗಳ ಕುರಿತು ವಿಪ್ರ ಸಂಘಟನೆಗಳು ಸ್ವಾಮೀಜಿಗಳಿಗೆ ಮನವರಿಕೆ ಮಾಡಿಸಿ ಮಠಗಳು ಸಮುದಾಯಗಳ ಏಳಿಗೆಗೆ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.

ಜ್ಯೋತಿಷ್ಯ ವಿದ್ವಾನ್‌ ವೇದ ಮೂರ್ತಿ ವಾದಿರಾಜ ಉಪಾಧ್ಯಾಯ ಮಾತನಾಡಿ, ಯುಗಾದಿಯಂದು ದೇವಸ್ಥಾನಗಳಲ್ಲಿ ಪಂಚಾಂಗ ಶ್ರವಣ ಮಾಡಿ, ಆ ವರ್ಷದ ಮಳೆ-ಬೆಳೆ ಕುರಿತು ಜನರಿಗೆ ಹೇಳುತ್ತಿದ್ದರು. ಇತ್ತೀಚೆಗೆ ಅರ್ಚಕರು ಮಾತ್ರ ಹೇಳಿ ಮುಗಿಸುತ್ತಾರೆ. ಹಳೆಯ ಸಂಪ್ರದಾಯಗಳನ್ನು ತ್ಯಜಿಸದೆ ಸನಾತನ ಸಂಸ್ಕೃತಿ ಮುಂದುವರಿಯಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ವಸ್ತಿಕ ನ್ಯಾಷನಲ್‌ ಬಿಸಿನೆಸ್ ಸ್ಕೂಲ್‌ ಪ್ರಾಂಶುಪಾಲೆ ಮಾಲಿನಿ ಹೆಬ್ಬಾರ್,‌ ಗಣೇಶ್ ಭಟ್ ಶರವು, ನಿವೃತ್ತ ವಾಯಸೇನಾ ಅಧಿಕಾರಿ ಅರವಿಂದ ಕುದ್ಕೋಳಿ, ಉದ್ಯಮಿ ಹರಿರಾವ್, ವಿಠಲದಾಸ ತಂತ್ರಿ, ವಿಜಯಲಕ್ಷ್ಮೀ ರಾವ್‌, ವಾದಿರಾಜ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು.

ಶ್ರೀನಿವಾಸ ಸಮೂಹ ಸಂಸ್ಥೆಯ ವಿಜಯಲಕ್ಷ್ಮೀ ರಾವ್, ಶಿವಳ್ಳಿ ಸ್ಪಂದನ ಸ್ಥಾಪಕ ಸದಸ್ಯ ವಾಸುದೇವ ಭಟ್‌ ಕುಂಜತ್ತೋಡಿ, ಕೋಶಾಧಿಕಾರಿ ರಘುರಾಮ ಭಟ್‌, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ಕದ್ರಿ ವಲಯ ಗೌರವಾಧ್ಯಕ್ಷ ರಾಮಚಂದ್ರ ಭಟ್‌ ಎಲ್ಲೂರು, ವಲಯ ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಉಪಾಧ್ಯಕ್ಷ ನೋಡ್‌ ಹರೀಶ್‌ ಆಚಾರ್‌, ವಲಯ ಕೋಶಾಧಿಕಾರಿ ರವಿಕಾಂತ ಭಟ್‌, ಪದಾಧಿಕಾರಿ ಪ್ರದೀಪ್‌ ರಾವ್ ಇದ್ದರು.

ಸ್ಥಾಪಕಾಧ್ಯಕ್ಷ ಕೃಷ್ಣ ಭಟ್ ಸ್ವಾಗತಿಸಿದರು. ಕದ್ರಿ ವಲಯದ ಉಪಾಧ್ಯಕ್ಷ ಸುಧಾಕರ್ ಭಟ್ ಆರೂರು ವಂದಿಸಿದರು. ಸ್ಥಾಪಕ ಸದಸ್ಯ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ವಲಯಗಳ ಸದಸ್ಯರಿಂದ ಸಂಗೀತ, ನೃತ್ಯ, ಕೊಳಲು ವಾದನ, ಕಿರು ನಾಟಕ ನಡೆಯಿತು. ವನಿತಾ ಎಲ್ಲೂರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಯುಗಾದಿಯ ವಿಶೇಷ ಖಾದ್ಯಗಳೊಂದಿಗೆ ಉಪಹಾರವನ್ನು ಸಂಪ್ರದಾಯದಂತೆ ಉಣಬಡಿಸಲಾಯಿತು.