ಸಾರಾಂಶ
ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬೀಳೂರು ಉತ್ಸವ ಸಮಿತಿಯಿಂದ ಶನಿವಾರ ಬಿ.ವಿ.ವಿ. ಸಂಘದ ಸಂಸ್ಥಾಪಕ ಅಧ್ಯಕ್ಷ ಬೀಳೂರು ಗುರುಬಸವರ ಸ್ವಾಮೀಜಿ ಪೂಣ್ಯಸ್ಮರಣೆ, ಶ್ರಾವಣ ಮಾಸದ ಉತ್ಸವ ಹಾಗೂ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಂದಿನ 30 ವರ್ಷಗಳ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಸೃಜನಾತ್ಮಕ ಹಾಗೂ ಕ್ರೀಯಾಶೀಲರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಬಿವಿವಿ ಸಂಘ ಜ್ಞಾನದಾಸೋಹ ಮಾಡುತ್ತಿದೆ ಎಂದು ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬೀಳೂರು ಉತ್ಸವ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬಿ.ವಿ.ವಿ. ಸಂಘದ ಸಂಸ್ಥಾಪಕ ಅಧ್ಯಕ್ಷ ಬೀಳೂರು ಗುರುಬಸವರ ಸ್ವಾಮೀಜಿ ಪೂಣ್ಯಸ್ಮರಣೆ, ಶ್ರಾವಣ ಮಾಸದ ಉತ್ಸವ ಹಾಗೂ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯರು ಉಪನ್ಯಾಸ ನೀಡಿ, ಬೀಳೂರು ಶ್ರೀಗಳ ನಡೆದ ಬಂದ ದಾರಿ ಕುರಿತು ಮಾಹಿತಿ ನೀಡಿದ ಅವರು ಬೀಳೂರ ಅಜ್ಜನವರ ಮಹಾಸಂಕಲ್ಪಕ್ಕೆ ಕೈ ಜೋಡಿಸಿದ ನಗರದ ಅನೇಕ ಜನ ವರ್ತಕರು, ಶಿಕ್ಷಣ ದಾನಿಗಳ ಸಾಮಾಜಿಕ ಸೇವೆ ಸ್ಮರಣಿಯವಾಗಿದೆ ಎಂದರು. ಟಿಕೀನಮಠದ ಮಲ್ಲಿಕಾರ್ಜುನ ದೇವರು ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಆಡಳಿತಾಧಿಕಾರಿ ವಿ.ಆರ್.ಶಿರೂಳ ಅವರು ಐದು ಜನ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು 60 ಸಾವಿರ ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ನೀಡುತ್ತಿದೆ ಎಂದು ಹೇಳಿದರು.
ವೇದಿಕೆ ಮೇಲೆ ಬಿವಿವಿಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಉಸ್ತವಸಮಿತಿ ಅಧ್ಯಕ್ಷ ಬಿ.ಆರ್. ಬೋಳಿಶೆಟ್ಟಿ, ಎ.ಎಸ್.ಪಾವಟೆ ಸೇರಿದಂತೆ ಸದಸ್ಯರು, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಬೀಳೂರ ಶ್ರೀಗಳ ಪಲ್ಲಕ್ಕಿ ಉತ್ಸವ: ಬೆಳಗಿನ ಜಾವ ಗುರುಬಸವ ಸ್ವಾಮೀಜಿ ಮೂರ್ತಿಗೆ ರುದ್ರಾಭಿಷೇಕ, ಶಿವ ಸಹಸ್ರನಾಮ ಸ್ತ್ರೋತ್ರಗಳಿಂದ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿ ನಂತರ ಸ್ವಾಮೀಜಿಗಳು ಹಾಗೂ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಬೀಳೂರು ಅಜ್ಜನವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ವೀರಭದ್ರೇಶ್ವರ ಸಾಂಸ್ಕೃತಿಕ ಭವನ ಹಾಗೂ ಬಸವೇಶ್ವರ ಭವನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರು ಸಾರ್ವಜನಿಕರು ಸೇರಿದಂತೆ ಹತ್ತು ಸಾವಿರಕ್ಕೂ ಜನ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು.ಸಂಭ್ರಮದ ಪಲ್ಲಕ್ಕಿ ಉತ್ಸವ: ಬೀಳೂರ ಅಜ್ಜನವರ ಪಲ್ಲಕ್ಕಿ ಉತ್ಸವ ದೇವಸ್ಥಾನ ಆವರಣದಲ್ಲಿ ಕರಡಿಮಜಲು ವಾದ್ಯದೊಂದಿಗೆ ಆರಂಭವಾದ ಮೆರವಣಿಗೆ ಸಂಘ ಆವರಣದಲ್ಲಿರುವ ಎಲ್ಲ ಮಹಾವಿದ್ಯಾಲಯಗಳ ಮುಂದೆ ಸಾಗಿ ಬನ್ನಿ ಕಟ್ಟೆಯವರೆಗೆ ಹೋಗಿ, ಮರಳಿ ದೇವಸ್ಥಾನಕ್ಕೆ ಬಂತು. ಮೆರವಣಿಗೆ ಉದ್ದಕ್ಕೂ ರಸ್ತೆ ತುಂಬೆಲ್ಲ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರವನ್ನು ವಿವಿಧ ಕಾಲೇಜು ವಿದ್ಯಾರ್ಥಿಯರು ಬಿಡಿಸಿದ್ದು ಗಮನ ಸೆಳೆಯಿತು.