ಸಾರಾಂಶ
ಮುದ್ದಾಬಳ್ಳಿ, ಮಂಗಳಾಪೂರದಿಂದ ಉತ್ಸವ ಮೂರ್ತಿ, ಹಲಗೇರಿಯಿಂದ ಕಳಸಾಗಮನ । ಮೆರವಣಿಗೆಗೆ ಜಾನಪದ ತಂಡಗಳ ಮೆರಗುಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಗವಿಮಠಕ್ಕೆ ಸೋಮವಾರ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ ಪಲ್ಲಕ್ಕಿ ಹಾಗೂ ಕಳಸಗಳು ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದವು.ನಗರದ ಕೋಟೆ ಏರಿಯಾದ ಜಡೇಗೌಡರ ಮನೆಯಿಂದ ಗವಿಸಿದ್ದೇಶ್ವರ ಅಜ್ಜನ ಪಲ್ಲಕ್ಕಿ ಮೆರವಣಿಗೆ ಗವಿಮಠಕ್ಕೆ ಆಗಮಿಸಿತು. ದಾರಿಯೂದ್ದಕ್ಕೂ ನಾನಾ ಜಾನಪದ ತಂಡಗಳು ಪಲ್ಲಕ್ಕಿ ಮೆರವಣಿಗೆಗೆ ಮೆರಗು ನೀಡಿದವು. ಗವಿಮಠದ ೧೧ನೇ ಪೀಠಾಧೀಶರಾಗಿದ್ದ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ (ಜಡೆ)ಯನ್ನೇ ತೆಗೆದುಕೊಟ್ಟರು. ಈ ಐತಿಹ್ಯದಲ್ಲಿ ಶ್ರೀಮಠದಲ್ಲಿ ಪೂಜೆಗೊಂಡ ಗವಿಸಿದ್ಧೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮುಹೂರ್ತಗೊಳಿಸಿ ಪೂಜಾದಿ ಸಲ್ಲಿಸಿ ಗವಿಮಠಕ್ಕೆ ಮೆರವಣಿಗೆ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಜಡೇ ನೀಡಿ ಬಂದ ಗವಿಸಿದ್ಧಪ್ಪಜ್ಜನ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಅತ್ಯಂತ ಸಡಗರ, ಸಂಭ್ರಮದಿಂದ ನಗರದಲ್ಲಿ ಜರುಗಿತು.
ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಆಗಮನ:ತಾಲೂಕಿನ ಮುದ್ದಾಬಳ್ಳಿಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಆಗಮಿಸಿತು. ಮುದ್ದಾಬಳ್ಳಿಯಿಂದ ಗ್ರಾಮಸ್ಥರು, ಭಕ್ತರು ಶ್ರದ್ಧಾ, ಭಕ್ತಿಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯನ್ನು ಗವಿಮಠಕ್ಕೆ ತಂದರು. ತಾಲೂಕಿನ ಹಲಗೇರಿ ಗ್ರಾಮದ ವೀರನಗೌಡ ಪಾಟೀಲರ ಮನೆಯಿಂದ ಕಳಸ ಹಾಗೂ ಮಂಗಳಾಪೂರದಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿ ಆಗಮಿಸಿದವು.