ಕಾಪು ತಾಲೂಕಿನ ದೆಂದೂರುಕಟ್ಟೆ ಬಳಿ ನಿರ್ಮಾಣವಾಗಲಿರುವ ಸಾಧ್ವಿಮಾಧ್ವಿ ಶಾಲೆಯ ಭೂಮಿ ಪೂಜೆ

ಕಾಪು ತಾಲೂಕು ದೆಂದೂರುಕಟ್ಟೆಯಲ್ಲಿ ಸಾಧ್ವಿಮಾಧ್ವಿ ಶಾಲೆಯ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ಉಡುಪಿ

ಹೆಣ್ಣುಮಗಳು ಸುಶಿಕ್ಷಿತಳಾದರೆ ‌ಸಮಾಜ ಸುಸಂಸ್ಕೃತವಾಗುತ್ತದೆ. ಹಾಗಾಗಿ ಹೆಣ್ಣುಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕು ಎಂದು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.ಕಾಪು ತಾಲೂಕಿನ ದೆಂದೂರುಕಟ್ಟೆ ಬಳಿ ನಿರ್ಮಾಣವಾಗಲಿರುವ ಸಾಧ್ವಿಮಾಧ್ವಿ ಶಾಲೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು‌.ನಮ್ಮ ಸಮಾಜದಲ್ಲಿ ಇಂದು ಬೇಕಾದಷ್ಟು ಧರ್ಮಾತೀತ ಶಾಲಾ ಸಂಸ್ಥೆಗಳಿವೆ. ಆದರೆ ಧರ್ಮಾನ್ವಿತ ಶಾಲೆಗಳ ಸಂಖ್ಯೆ ಕಡಿಮೆ ಇದೆ. ನಾವು ಅಂತಹ ಶಾಲೆಗಳನ್ನು ನಿರ್ಮಿಸಿ ಸನಾತನ ಸಂಸ್ಕೃತಿ ಪಸರಿಸುವ ಕೆಲಸ ಮಾಡಬೇಕಿದೆ ಎಂದರು. ಎಲ್ಲಿ ಧರ್ಮವಿರುತ್ತೋ ಅಲ್ಲಿ ದೇವರು ಇರುತ್ತಾನೆ. ದೇವರು ಇದ್ದಲ್ಲಿ ಎಲ್ಲ ಉತ್ತಮ ಕಾರ್ಯಗಳು ಸಾಕಾರಗೊಳ್ಳುತ್ತವೆ. ಅಂತಹ ಧರ್ಮ ಪ್ರಜ್ಞೆಯನ್ನು ನಾವು ಜಾಗೃತಗೊಳಿಸಬೇಕು ಎಂದರು.

ಇಂದಿನ ಹಲವಾರು ವಿದ್ಯಮಾನಗಳು ಸನಾತನ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುತ್ತಿವೆ. ಆದರೆ ಅದನ್ನು ನಾವು ಸವಾಲಾಗಿ ಸ್ವೀಕರಿಸಿ ಸನಾತನ ಸಂಸ್ಕೃತಿ ಉಳಿಸಲು ವಿರೋಧಕ್ಕೆ ವಿರುದ್ಧವಾಗಿ ಈಜಬೇಕಿದೆ ಎಂದು ಹೇಳಿದರು.ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ಭಟ್ ಎಂ., ಮುಂಬೈ ಟಿಸಿಎಸ್ ಐಯಾನ್ ಗ್ಲೋಬಲ್ ಹೆಡ್ ವೆಂಗುಸ್ವಾಮಿ ರಾಮಸ್ವಾಮಿ, ಅದಾನಿ ಗ್ರೂಪ್ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಬೆಂಗಳೂರು ಕಾಂಗ್ರೆಸ್ ಮುಂದಾಳು ಬಾಲಾಜಿ ಅಭ್ಯಾಗತರಾಗಿ ಆಗಮಿಸಿ, ಶ್ರೀಗಳ ಕಾರ್ಯವನ್ನು ಪ್ರಶಂಸಿಸಿ ಸಹಕಾರದ ಭರವಸೆ ನೀಡಿದರು.ಈ ಸಂದರ್ಭ ಸ್ಥಳ ದಾನಿ ವೇದವ್ಯಾಸ ಉಪಾಧ್ಯಾಯ ಹಾಗೂ ಸಾಧ್ವಿಮಾಧ್ವಿ ಸಂಸ್ಥೆ ಕಾರ್ಯದರ್ಶಿ ಶ್ರೀಶ ಭಟ್ ಕಡೆಕಾರ್ ಅವರನ್ನು ಶ್ರೀಗಳು ಗೌರವಿಸಿದರು. ಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್ ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಹೆಬ್ಬಾರ್ ಸ್ವಾಗತಿಸಿದರು.