ಸಾರಾಂಶ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆತೀರ್ಥಹಳ್ಳಿ
ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪಂಡಿತರಿಗಿಂತ ಪಾಮರರ ಪಾತ್ರವೇ ಮಹತ್ವವಾದುದು. ಭಾಷೆಯ ಉನ್ನತಿಯಲ್ಲಿ ಪಂಡಿತರು ಎಷ್ಟು ಮುಖ್ಯವೋ ಪಾಮರರ ಪಾತ್ರ ಇದಕ್ಕಿಂತ ಮಿಗಿಲಾದುದು. ಒಂದು ಭಾಷೆಯು ಜನಸಾಮಾನ್ಯರ ನಾಲಿಗೆಯಲ್ಲಿ ನಲಿದಾಡಿದಾಗ ಅದರ ಔನ್ನತ್ಯ ಸಾಧ್ಯ ಎಂದು ಕೊಪ್ಪ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಎಚ್.ಎಂ.ರವಿಕಾಂತ್ ಅಭಿಪ್ರಾಯಪಟ್ಟರು.ತೀರ್ಥಹಳ್ಳಿ ಬಾಳೇಬೈಲಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಗ್ಲೀಷ್ ಭಾಷೆಗೆ ಸ್ವಂತ ಲಿಪಿಯಿಲ್ಲ. ಅದು ಲ್ಯಾಟಿನ್ ಭಾಷೆಯಿಂದ ಲಿಪಿ ಪಡೆದುಕೊಂಡಿದೆ. ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವ ಗುಣ ಇಂಗ್ಲಿಷ್ ಭಾಷೆಗಿರುವುದರಿಂದ ಅದು ಜಗತ್ತಿನ ಉದ್ದಗಲ ಪಸರಿಸಿದೆ ಎಂದು ಹೇಳಿದರು.
ಕನ್ನಡ ಭಾಷೆಯ ಜೊತೆಗೆ ಸಂಸ್ಕೃತಿಯೂ ಅಡಕವಾಗಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ಬಳಿಕ ಕನ್ನಡ ನಾಡಿನಲ್ಲಿಯೇ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕವೆಂಬ ಕಲ್ಪನೆ ಮೊಳೆತು ಇದು ಪ್ರತ್ಯೇಕ ರಾಜ್ಯ ಕೇಳುವ ಮಟ್ಟಕ್ಕೂ ಹೋಗಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಹಾಗೂ ಕುವೆಂಪು ಅವರ ಸಕಾಲಿಕ ಮಾರ್ಗದರ್ಶನದ ಫಲವಾಗಿ ಕರ್ನಾಟಕ ಒಂದಾಗಿ ಉಳಿಯಿತು. ಆದರೂ ಅಂದಿನ ಮೈಸೂರು ರಾಜ್ಯದಲ್ಲಿ ಮಹಾರಾಜರ ದೂರದೃಷ್ಟಿಯ ಫಲವಾಗಿ ದಕ್ಷಿಣ ಕರ್ನಾಟಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಔದ್ಯೋಗಿಕವಾಗಿ ಮುಂದುವರಿಯಿತು. ಆ ಕಾಲದಲ್ಲಿಯೇ ಮಹಾರಾಜರು ಮೀಸಲಾತಿಯಂತಹ ಪರಿಕಲ್ಪನೆಯನ್ನು ತಂದಿದ್ದರು. ಆದರೆ ಉತ್ತರ ಕರ್ನಾಟಕ ಸ್ವಲ್ಪ ಹಿಂದುಳಿಯಿತು ಎಂದು ಹೇಳಿದರು.ಸರೋಜಿನಿ ಮಹಿಷಿ ವರದಿ ಜಾರಿಯಲ್ಲಿ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಹಾಗೆಯೇ ಕೆಲಸವನ್ನು ಅರಸಿ ಗೋವಾಗೆ ತೆರಳುವ ಕನ್ನಡಿಗರ ಮೇಲೆ ಶೋಷಣೆಯಾಗುತ್ತಿರುವುದು ಖಂಡನೀಯ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ರಚನೆಯಾಗುವಲ್ಲಿ ಕರ್ನಾಟಕ ಏಕೀಕರಣ ಹೋರಾಟಗಾರರ ಹೋರಾಟದ ಜೊತೆಗೆ ಆಂಧ್ರದ ಪೊಟ್ಟಿ ಶ್ರೀರಾಮುಲು ಅವರ ಬಲಿದಾನವನ್ನು ಮರೆಯುವಂತೆಯೇ ಇಲ್ಲ. ತೆಲುಗು ಭಾಷೆ ಮಾತನಾಡುವ ಜನರ ಪ್ರತ್ಯೇಕ ಪ್ರಾಂತ್ಯವಾಗಬೇಕೆಂದು ಆಗ್ರಹಿಸಿ 51 ದಿನಗಳ ಆಮರಣಾಂತ ಉಪವಾಸ ಕೈಗೊಂಡು ಹುತಾತ್ಮರಾದ ಶ್ರೀರಾಮುಲು ಅವರ ತ್ಯಾಗದ ಫಲವಾಗಿ 1956 ರ ನ.1 ರಂದು ಆಗಿನ ಕೇಂದ್ರ ಸರ್ಕಾರ ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳ ಸ್ಥಾಪನೆ ಘೋಷಿಸಿತು ಎಂದರು.ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಗಣಪತಿ ಎಚ್.ಎ, ಕನ್ನಡ ವಿಭಾಗದ ಪ್ರಾಧ್ಯಾಪಕ ಮಾರತಿ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳ ತಿಂಗಳ ಭಿತ್ತಿ ಪತ್ರಿಕೆ (ವಾಲ್ ಮ್ಯಾಗಜೀನ್) ಪಾಂಚ್ಯಜನ್ಯವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ವಿದ್ಯಾರ್ಥಿನಿಯರು ಕನ್ನಡ ಗೀತೆಗಳನ್ನು ಹಾಡಿದರೆ, ಚುಟುಕ ಸಾಹಿತಿ ಸುರೇಶ್ ಅವರು ಚುಟುಕು ಕವನಗಳನ್ನು ವಾಚಿಸಿದರು. ಶಕುಂತಲಾ ರಮೇಶ್ ಅಂಟಿಕೆ ಪಂಟಿಕೆ ಗೀತೆ ಹಾಡಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಪ್ರಸನ್ನ ತಿರಳೇಬೈಲು ವಂದಿಸಿದರು. ವಿದ್ಯಾರ್ಥಿನಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.