ಸಾರಾಂಶ
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಫಲಿತಾಂಶ ಗಮನಿಸಿದರೆ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ವಿಫಲ ನಾಯಕರು ಎನ್ನುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಧಾರವಾಡ/ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆ ಫಲಿತಾಂಶ ಗಮನಿಸಿದರೆ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ವಿಫಲ ನಾಯಕರು ಎನ್ನುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೋನಿಯಾ ಗಾಂಧಿ ಅವರು ಸತತವಾಗಿ, ಪ್ರಯತ್ನ ಪೂರ್ವಕವಾಗಿ ಹೊಸ ಹೊಸ ಎಂಜಿನ್ ಅಳವಡಿಸಿ ವಿಮಾನ ಹಾರಿಸಿದರೂ ಕೆಳಗೆ ಬೀಳುತ್ತಿದೆ. ಕರ್ನಾಟಕ ಉಪಚುನಾವಣೆಯ ಒಂದೆರೆಡು ಕ್ಷೇತ್ರ ಹೊರತು ಪಡಿಸಿ ಇಡೀ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಮಹಾರಾಷ್ಟ್ರದಲ್ಲಿ ಶೇ. 10ರಿಂದ 11ರಷ್ಟು ಮಾತ್ರ ಉಳಿದುಕೊಂಡಿದ್ದು, ಅಲ್ಲಿ ಒಬ್ಬರೂ ವಿರೋಧ ಪಕ್ಷಕ್ಕೂ ಹೋಗದ ಸ್ಥಿತಿ ಬಂದಿದೆ. ಇನ್ನು, ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆಗೂಡಿ ಹತ್ತು ಸ್ಥಾನಗಳನ್ನು ಮಾತ್ರ ಕಾಂಗ್ರೆಸ್ ಪಡೆದಿದೆ ಎಂದರು.ರಾಜ್ಯದ ಉಪ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ವಕ್ಫ್ ಅನ್ಯಾಯ ಮುಂದುವರೆಸಿದರೂ ಅಚ್ಚರಿ ಏನಿಲ್ಲ. ಮೂರು ಕ್ಷೇತ್ರದಲ್ಲಿ ಸೇರಿ 25 ಸಾವಿರ ಮತಗಳು ಹೆಚ್ಚಾಗಿವೆ ಎಂದ ಮಾತ್ರಕ್ಕೆ ವಕ್ಫ್ ಅನ್ಯಾಯ ನಡೆಯಲಿದೆ ಎಂದು ಭಾವಿಸಿದರೆ ಜನರು ಬುದ್ಧಿ ಕಲಿಸುತ್ತಾರೆ ಎಂದು ಜೋಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಪ ಚುನಾವಣೆಯಲ್ಲಿ ದುಡ್ಡು, ಸರ್ಕಾರದ ಯಂತ್ರ ದುರ್ಬಳಕೆಧಾರವಾಡ: ರಾಜ್ಯದ ಉಪಚುನಾವಣೆಯ ಫಲಿತಾಂಶ ಗಮನಿಸಿದರೆ, ಕಂಡು ಕೇಳರಿಯದ ರೀತಿಯಲ್ಲಿ ದುಡ್ಡು ಹಾಗೂ ಸರ್ಕಾರದ ಯಂತ್ರಗಳು ಬಳಕೆಯಾಗಿರುವುದು ಕಂಡು ಬರುತ್ತದೆ. ಇಷ್ಟಾಗಿಯೂ ಶಿಗ್ಗಾಂವಿ, ಚೆನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಆಗಿರುವ ಬಿಜೆಪಿ ಸೋಲನ್ನು ಗಂಭೀರವಾಗಿ ಪರಿಶೀಲಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಹೆಚ್ಚು ಅವಕಾಶವಿರುತ್ತದೆ. ಆಡಳಿತ ಪಕ್ಷದಿಂದ ಅನುದಾನದ ಅನುಕೂಲದ ಹಿನ್ನೆಲೆಯಲ್ಲಿ ಜನರು ಮತ ಹಾಕುತ್ತಾರೆ. ಜೊತೆಗೆ ಉಪ ಚುನಾವಣೆಯ ಕ್ಷೇತ್ರದ ಎರಡ್ಮೂರು ಗ್ರಾಪಂಗಳಿಗೆ ಒಬ್ಬರಂತೆ ಮಂತ್ರಿಗಳು ಠಿಕಾಣಿ ಹೂಡುವ ಮೂಲಕ ಯಾವ ಪ್ರಮಾಣದಲ್ಲಿ ಹಣ ಹಂಚಿಕೆ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಸೋಲನ್ನು ಒಪ್ಪಿಕೊಳ್ಳುತ್ತೇವೆ. ಹಾಗಂತ ಕಾಂಗ್ರೆಸ್ ಹೇಳಿದ ರೀತಿ ಇವಿಎಂ ದೋಷ ಎನ್ನೋದಿಲ್ಲ ಎಂದರು.ವಿಶೇಷವಾಗಿ ಶಿಗ್ಗಾಂವ ಕ್ಷೇತ್ರದಲ್ಲಿ ಸಂಪೂರ್ಣ ಗೆಲುವಿನ ಭರವಸೆ ಇತ್ತು. ಆದರೆ, ಎಲ್ಲಿ, ಏನು ತಪ್ಪಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಜೊತೆಗೆ ಈ ಫಲಿತಾಂಶವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. 2019ರ ಈಚೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದೇವೆ. ಈಗಿನ ಉಪ ಚುನಾವಣೆ ಫಲಿತಾಂಶ ಗಮನಿಸಿದರೆ, ಕರ್ನಾಟಕ ಮಟ್ಟಿಗೆ ಸಂಪೂರ್ಣ ವಿಮರ್ಶೆ ಮಾಡಿಕೊಳ್ಳುತ್ತೇವೆ ಎಂದು ಜೋಶಿ ಸ್ಪಷ್ಟಪಡಿಸಿದರು.