ಪಂಪಭಾರತ ಮಹಾಕಾವ್ಯದಲ್ಲಿ ಕಂಡುಬರುವ ಯುದ್ಧದ ಪ್ರಸಂಗ, ಪಾತ್ರಗಳ ನಡುವಿನ ಮಾತುಕತೆ, ಸಂಭಾಷಣೆಯ ಶೈಲಿ ಹಾಗೂ ಕಥನ ವಿಧಾನದಲ್ಲಿ ದೇಸಿಯತೆಯ ಸೊಗಡು ಎದ್ದು ಕಾಣುತ್ತದೆ
ಬಳ್ಳಾರಿ: ಪಂಪನ ಭಾರತ ಕೇವಲ ಮಹಾಭಾರತದ ಕಥೆ ಪುನರ್ ಕಥನ ಮಾಡಿದ ಕೃತಿಯಲ್ಲ. ಅದು ಪಂಪನ ವಿಶಿಷ್ಟ ದೃಷ್ಟಿಕೋನದಿಂದ ರೂಪುಗೊಂಡ ದೇಸಿಯ ಕಥೆಯಾಗಿದೆ ಎಂದು ಹಿರಿಯ ಲೇಖಕ ಡಾ. ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಪನ ಕರ್ಣ ಕುರಿತು ವಿಶೇಷ ಉಪನ್ಯಾಸ ನೀಡಿದರು.ಪಂಪಭಾರತ ಮಹಾಕಾವ್ಯದಲ್ಲಿ ಕಂಡುಬರುವ ಯುದ್ಧದ ಪ್ರಸಂಗ, ಪಾತ್ರಗಳ ನಡುವಿನ ಮಾತುಕತೆ, ಸಂಭಾಷಣೆಯ ಶೈಲಿ ಹಾಗೂ ಕಥನ ವಿಧಾನದಲ್ಲಿ ದೇಸಿಯತೆಯ ಸೊಗಡು ಎದ್ದು ಕಾಣುತ್ತದೆ. ಪಂಪನು ತನ್ನ ಕಾಲದ ಸಮಾಜ, ನೆಲ, ಜನಜೀವನ ಮತ್ತು ಪರಿಸರದ ಅನುಭವ ಕಾವ್ಯದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾನೆ. ಅರಿವನ್ನು ಬೆಳೆಸುವುದೇ ನಿಜವಾದ ಧರ್ಮ ಎಂಬ ಚಿಂತನೆ ಹೊಂದಿದ್ದ ಪಂಪ ಎಲ್ಲ ಕಾಲಕ್ಕೂ ಸಲ್ಲುವ ಕವಿ. ಅಪಾರ ಪ್ರೇಮ, ಪರಿಸರದ ಮೇಲಿನ ಕಾಳಜಿ ಹಾಗೂ ತನ್ನ ನೆಲದ ಮೇಲಿನ ಪ್ರೀತಿ ಅವರ ಸಾಹಿತ್ಯದುದ್ದಕ್ಕೂ ಹಾಸುಹೊಕ್ಕಾಗಿದೆ. ಆಂಧ್ರದಲ್ಲಿ ಜನಿಸಿದ್ದರೂ ಪಂಪ ಬರೆದದ್ದು, ಆಲೋಚಿಸಿದ್ದು ಹಾಗೂ ಉಸಿರಾಡಿದ್ದು ಕನ್ನಡದಲ್ಲಿಯೇ ಎನ್ನುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿ ಎಂದು ಹೇಳಿದರು.
ಪಂಪನ ಕಾವ್ಯದಲ್ಲಿ ಕರ್ಣ ಪ್ರಮುಖ ನಾಯಕನಾಗಿ ರೂಪುಗೊಂಡಿದ್ದಾನೆ. ಕರ್ಣನ ಪಾತ್ರದ ಮೂಲಕ ನಿಷ್ಠೆ, ತ್ಯಾಗ, ಔದಾರ್ಯ ಹಾಗೂ ಮಾನವೀಯ ಗುಣ ಪಂಪ ಓದುಗರಿಗೆ ಪರಿಚಯಿಸಿದ್ದಾರೆ.ಅದೇ ರೀತಿ ಕುಂತಿಯ ಪಾತ್ರದ ಮೂಲಕ ಹೆಣ್ಣಿನ ಆತಂಕ, ತಲ್ಲಣ ಹಾಗೂ ಮಾನಸಿಕ ಹೊಯ್ದಾಟ ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಉಪಮೆ ಮತ್ತು ಪ್ರತಿಮೆ ಮೂಲಕ ಪಂಪ ಸೃಷ್ಟಿಸಿರುವ ಕಾವ್ಯ ಸೌಂದರ್ಯ ಕನ್ನಡ ಸಾಹಿತ್ಯದಲ್ಲಿ ಅವರನ್ನು ಅಜರಾಮರರನ್ನಾಗಿಸಿದೆ ಎಂದು ಡಾ. ಜಾಜಿ ದೇವೇಂದ್ರಪ್ಪ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಹಾಗೂ ಹಿರಿಯ ಸಮಾಜಮುಖಿ ಚಿಂತಕ ಸಿ. ಚನ್ನಬಸವಣ್ಣ ಮಾತನಾಡಿ, ಕನ್ನಡ ಸಾಹಿತ್ಯದ ಪ್ರಾಚೀನ ಪರಂಪರೆ ಶ್ರೀಮಂತಗೊಳಿಸಿದ ಮಹಾಕವಿ ಪಂಪ ಭಾರತೀಯ ಭಾಷೆಗಳ ಸಾಹಿತ್ಯ ಪರಂಪರೆಯಲ್ಲಿಯೇ ಉತ್ಕೃಷ್ಟ ಕಾವ್ಯ ರಚಿಸಿದ ಶ್ರೇಷ್ಠ ಕವಿಯಾಗಿದ್ದು, ಅವರ ಸಾಹಿತ್ಯ ನಂತರದ ಹಲವು ತಲೆಮಾರುಗಳ ಕವಿಗಳಿಗೆ ಮಾರ್ಗದರ್ಶಕವಾಗಿದೆ. ಪಂಪನ ಕಾವ್ಯತತ್ವ, ಚಿಂತನೆ, ಲೋಕಾನುಭವ ಹಾಗೂ ಭಾಷಾ ಬಳಕೆ ವಿಶಿಷ್ಟವಾದದ್ದು. ಹಳೆಗನ್ನಡ ಸಾಹಿತ್ಯ ಕೇವಲ ಪರೀಕ್ಷೆಯ ದೃಷ್ಟಿಯಿಂದ ನೋಡುವ ಬದಲು ಅದರಲ್ಲಿರುವ ಜೀವನಾನುಭವ ಮತ್ತು ಮೌಲ್ಯ ಅರ್ಥೈಸಿಕೊಳ್ಳಬೇಕು. ಪಂಪನ ಅಪರೂಪದ ಸಾಹಿತ್ಯ ಮತ್ತೆ ಮತ್ತೆ ಓದುವ ಮೂಲಕ ಕನ್ನಡದ ಹೆಮ್ಮೆಯ ವಾರಸುದಾರರಾಗಬೇಕು ಎಂದು ಹೇಳಿದರು.ಕನ್ನಡ ವಿಭಾಗದ ಮುಖ್ಯಸ್ಥ ದಸ್ತಗೀರಸಾಬ್ ದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ. ರಾಮಸ್ವಾಮಿ ಹಾಗೂ ಲಿಂಗಪ್ಪ ಉಪಸ್ಥಿತರಿದ್ದರು.