ಕಾಡಾನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರಪತ್ರ

| Published : Jul 06 2024, 12:51 AM IST

ಸಾರಾಂಶ

ಬಿಆರ್‌ಟಿ ಅರಣ್ಯ ಪ್ರದೇಶದ ಗ್ರಾಮಗಳ ಜನರು ಕಾಡಾನೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ವತಿಯಿಂದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು ಬಿಆರ್‌ಟಿ ಅರಣ್ಯ ಪ್ರದೇಶದ ಗ್ರಾಮಗಳ ಜನರು ಕಾಡಾನೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ವತಿಯಿಂದ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.

ಹನೂರು ತಾಲೂಕಿನ ಬಹುತೇಕ ಕಾಡಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿರುವುದರಿಂದ ಕಳೆದ ವಾರ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಒಂಟಿ ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಕರಪತ್ರ ಹಂಚಿಕೆ: ಬೈಲೂರು ಬಿಆರ್‌ಟಿ ಅರಣ್ಯ ಪ್ರದೇಶದ ಗುಂಡಿಮಾಳ ಸುತ್ತಮುತ್ತಲಿನ ಗ್ರಾಮಗಳ ಬಳಿ ಅರಣ್ಯ ಪ್ರದೇಶವಿದ್ದು ಇತ್ತೀಚೆಗೆ ಕಾಡಾನೆಗಳ ಓಡಾಟ ಹೆಚ್ಚಾಗಿದ್ದು ಗುಂಡಿಮಾಳ ಗ್ರಾಮಕ್ಕೆ ತೆರಳುವ ರಸ್ತೆಯ ಮಾರ್ಗವಾಗಿ ಬರುವ ಗ್ರಾಮಗಳಾದ ಹೊಸ ಪೋಡು, ಟಿಬೆಟಿಯನ್ ಕಾಲೋನಿ, ಎ ಮತ್ತು ಬಿ ವಿಲೇಜ್ ಗ್ರಾಮದ ನಿವಾಸಿಗಳು ಈ ರಸ್ತೆಯಲ್ಲಿ ಓಡಾಡುವ ಸಂದರ್ಭದಲ್ಲಿ ಜಾಗೃತರಾಗಿ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಜಾಗೃತಿ ಮೂಡಿಸಿದರು.

ಪುಂಡಾನೆ ಬಗ್ಗೆ ಎಚ್ಚರ: ಕಳೆದ ವಾರ ಅರಣ್ಯ ಇಲಾಖೆ ನೌಕರರ ಮೇಲೆ ದಾಳಿ ಮಾಡಿ ಗಾಯಗೊಳಿಸಿರುವ ಪುಂಡಾನೆ ಬಿಆರ್‌ಟಿ ವಲಯ ಅರಣ್ಯ ಪ್ರದೇಶದ ಸುತ್ತಮುತ್ತಲಿನಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಈ ಭಾಗದ ಗುಂಡಿಮಾಳ ಅಡ್ಡರಸ್ತೆ ಸುತ್ತಮುತ್ತಲಿನ ಗ್ರಾಮ ಮತ್ತು ಸಂಚರಿಸುವ ನಾಗರಿಕರು ಜಮೀನಿಗೆ ಒಬ್ಬೊಬ್ಬರೇ ತಿರುಗಾಡಬೇಡಿ ಸಂಜೆ ವೇಳೆ ಅರಣ್ಯದಂಚಿನಲ್ಲಿ ನಾಗರಿಕರು ಈ ಭಾಗದಲ್ಲಿ ಕಾಡಾನೆ ಕಂಡು ಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಮತ್ತು ಸುತ್ತಮುತ್ತಲಿನ ಗ್ರಾಮ ಮತ್ತು ನಿವಾಸಿಗಳು ನಿಮ್ಮ ಸಣ್ಣ ಮಕ್ಕಳು ಹಾಗೂ ಜಾನುವಾರುಗಳ ಬಗ್ಗೆ ಎಚ್ಚರಿಕೆಯಿಂದ ಸುರಕ್ಷಿತ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಿ. ಅನಗತ್ಯವಾಗಿ ಪುಟ್ಟ ಮಕ್ಕಳನ್ನು ಸಂಜೆ ವೇಳೆ ಹೊರಗಡೆ ಆಟ ಆಡಲು ಬಿಡಬೇಡಿ. ಗುಂಡಿ ಮಾಳ ಮತ್ತು ಇನ್ನಿತರ ಗ್ರಾಮಗಳಿಗೆ ತೆರಳುವ ನಿವಾಸಿಗಳು ಸಂಜೆ 6 ರ ನಂತರ ಈ ಭಾಗದಲ್ಲಿ ಕಾಡಾನೆಗಳು ಹೆಚ್ಚಾಗಿ ಓಡಾಡುವುದರಿಂದ ಪರ್ಯಾಯ ಮಾರ್ಗವಾದ ಎಸ್‌ಬಿಎಂ ರಸ್ತೆಯಲ್ಲಿ ಸಂಚರಿಸುವಂತೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮನವಿ ಮಾಡಿದೆ.

ಗುಂಡಿ ಮಾಳ ರಸ್ತೆ ಗೇಟ್ ಬಂದ್ ಮಾಡಿ:

ಬಿಆರ್‌ಟಿ ವಲಯ ಅರಣ್ಯ ಪ್ರದೇಶದಿಂದ ದಿನನಿತ್ಯ ಕಾಡಾನೆಗಳು ರೈತರ ಜಮೀನಿಗೆ ಬರುತ್ತಿರುವುದರಿಂದ ಗುಂಡಿಮಾಳ ಹಾಗೂ ಹೊಸಪೋಡು, ಎ ಮತ್ತು ಬಿ ವಿಲೇಜ್ ಗ್ರಾಮಸ್ಥರು ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿ ಹೋಗಿರುವ ರಸ್ತೆಯಲ್ಲಿ ಸಂಜೆ ವೇಳೆ ಸಂಚರಿಸುವುದರಿಂದ ನಾಗರಿಕರು ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ಅನ್ನು ತೆರೆದು ಹೋಗುವುದರಿಂದ ಕಾಡಾನೆಗಳು ನೇರವಾಗಿ ರೈತರ ಜಮೀನಿಗೆ ಬರುತ್ತಿದೆ. ಹೀಗಾಗಿ ಜಿಲ್ಲಾಡಳಿತ ಈ ಭಾಗದಲ್ಲಿ ಸಂಚರಿಸುವ ನಾಗರಿಕರಿಗೆ ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ರಸ್ತೆಯಲ್ಲಿ ಓಡಾಡುವುದನ್ನು ನಿರ್ಬಂಧಿಸಿ ಪರ್ಯಾಯ ರಸ್ತೆಯಾದ ಎಸ್‌ಬಿಎಂ ರಸ್ತೆಯಲ್ಲಿ ಓಡಾಡಲು ಸೂಚನೆ ನೀಡಬೇಕು ಎಂದು ಎಂಜಿ ದೊಡ್ಡಿ ರೈತರು ಮನವಿ ಮಾಡಿದ್ದಾರೆ.

ಬೈಲೂರು-ಎಂಜಿ ದೊಡ್ಡಿ ಭಾಗದಲ್ಲಿ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಫಸಲು ನಾಶಗೊಳಿಸಿ, ಪರಿಕರಗಳನ್ನು ಸಹ ತುಳಿದು ಹಾಳು ಮಾಡುತ್ತಿವೆ. ಗುಂಡಿಮಾಳ ಗ್ರಾಮಕ್ಕೆ ತೆರಳುವ ರಸ್ತೆ ಸಂಜೆ ವೇಳೆ ಬಂದ್ ಮಾಡುವ ಮೂಲಕ ಕಾಡಾನೆಗಳನ್ನು ಅರಣ್ಯ ಪ್ರದೇಶದಿಂದ ಬರುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಕಾಡಾನೆಗಳಿಂದ ಈ ಭಾಗದಲ್ಲಿರುವ ಜನತೆಗೆ ಜೀವ ಹಾನಿ ಸಂಭವಿಸುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು. ಸದಾನಂದ, ರೈತ, ಹುಣಸೆಪಾಳ್ಯ ಗ್ರಾಮ.

ಅರಣ್ಯ ಇಲಾಖೆ ವತಿಯಿಂದ ಬೈಲೂರು ಎಂಜಿ ದೊಡ್ಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಗಿದೆ. ಈ ಭಾಗದ ಜನತೆ ಅರಣ್ಯ ಇಲಾಖೆಗೆ ಸಹಕಾರ ನೀಡುವ ಮೂಲಕ ಗುಂಡಿಮಾಳ ರಸ್ತೆಯಲ್ಲಿ ಸುತ್ತಲೂ ಟ್ರಂಚ್ ಮತ್ತು ಸೋಲಾರ್ ಬೇಲಿ ಇರುವುದರಿಂದ ಪಿಡಬ್ಲ್ಯೂಡಿ ರಸ್ತೆಯಲ್ಲಿ ಕಾಡಾನೆಗಳು ರೈತರ ಜಮೀನಿಗೆ ಬರುತ್ತಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಬಂದ್ ಮಾಡಲು ಗ್ರಾಮಸ್ಥರು ಸಹಕಾರ ನೀಡಿ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಬೇಕು.ಪ್ರಮೋದ್, ವಲಯ ಅರಣ್ಯ ಅಧಿಕಾರಿ, ಬೈಲೂರು