ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನಎಲ್ಲರ ಗಮನಸೆಳೆದಿರುವ ಪಾಂಚಜನ್ಯ ಹಿಂದೂ ಗಣಪತಿ ಸಮಿತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಬುಧವಾರ ಮಧ್ಯಾಹ್ನದಂದು ಗಣ್ಯರ ಎದುರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಗಣೇಶ ಪ್ರತಿಷ್ಠಾಪನೆಯು ವಿಜೃಂಭಣೆಯಿಂದ ನೆರವೇರಿತು.ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ ಪಾಂಚಜನ್ಯವತಿಯಿಂದ ಎಲ್ಲಾ ಸ್ವಯಂ ಸೇವಕರು ಸೇರಿ ವಿಘ್ನೇಶ್ವರನನ್ನು ಪ್ರತಿಷ್ಠಾಪನೆ ಮಾಡಿದ್ದು, ನಮ್ಮ ಜಿಲ್ಲೆ ಮತ್ತು ರಾಜ್ಯದ ಜನೆತೆಗೆ ಆರೋಗ್ಯ, ಆಯಸ್ಸು, ಐಶ್ವರ್ಯ ಮತ್ತು ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ, ಉತ್ತಮ ಮಳೆ, ಬೆಳೆ ಆಗಿ ರೈತರಲ್ಲಿ ಸಂತೋಷ ಉಂಟು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಪ್ರತಿ ವರ್ಷವೂ ಕೂಡ ಪಾಂಚಜನ್ಯ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಕೂಡ ಒಳ್ಳೆ ರೀತಿಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ವಿಸರ್ಜನೆ ವೇಳೆಯೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಯಶಸ್ವಿಗೊಳಿಸಲಿ ಎಂದು ಹಾರೈಸುವುದಾಗಿ ಹೇಳಿದರು.ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ರಾಜ್ಯದಲ್ಲಿಯೇ ಹಾಸನ ಜಿಲ್ಲೆಯಲ್ಲಿ ಮೆಚ್ಚುವಂತಹ ಗಣೇಶ ಪ್ರತಿಷ್ಠಾಪನೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಸಿಗಲಿ. ಸಮಾಜದಲ್ಲಿ ಸೌಹಾರ್ದತೆ ಇನ್ನಷ್ಟು ಹೆಚ್ಚಿಸಲಿ. ಬಂಧು- ಬಾಂಧವರಿಗೆ ಉತ್ತಮ ಆರೋಗ್ಯ ಕಲ್ಪಿಸಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಗೌರವಾಧ್ಯಕ್ಷ ಹಾಗೂ ೩ನೇ ವಾರ್ಡ್ ನಗರ ಪಾಲಿಕೆ ಸದಸ್ಯ ದಯಾನಂದ್ ಮಾತನಾಡಿ, ಪಾಂಚಜನ್ಯ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಬುಧವಾರದಂದು ಕಾರ್ಯಾರಂಭವಾಗಿದೆ. ದೇಶದೆಲ್ಲೆಡೆ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನೆಗೊಂಡಿರುವಂತೆ ಹಾಸನದಲ್ಲೂ ಚಾಲನೆ ದೊರಕಿದೆ. ಸೆಪ್ಟೆಂಬರ್ ೩ರವರೆಗೂ ಗಣಪತಿ ಇಡಲಾಗಿದ್ದು, ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ನಮ್ಮ ಗಣಪತಿ ಪರಿಸರ ಸ್ನೇಹಿಯಾಗಿದ್ದು, ಇಡೀ ವಿಶ್ವದಲ್ಲಿ ಶಾಂತಿ, ನೆಮ್ಮದಿ ಸಕಲ ಸಂಪನ್ನಗಳೊಂದಿಗೆ ಉತ್ತಮವಾಗಿರಲೆಂದು ಗಣಪತಿ ಬಳಿ ಪ್ರಾರ್ಥಿಸಿರುವುದಾಗಿ ಹೇಳಿದರು. ಕಲಾ ಸಂಸ್ಕೃತಿಕ ತಂಡಗಳು, ಸುಗಮ ಸಂಗೀತಗಳು ಇರುತ್ತದೆ. ಈ ವೇಳೆ ಕಣ್ಣನ್ ಅವರ ಕಾರ್ಯಕ್ರಮ ಕೂಡ ಇರುತ್ತದೆ. ಸೆ. ೩ರಂದು ಮಧ್ಯಾಹ್ನ ೨ ಗಂಟೆಗೆ ಬೃಹತ್ ಶೋಭಯಾತ್ರೆ ಆರಂಭಗೊಂಡು ನಗರಾದ್ಯಂತ ಪ್ರಮುಖ ಬೀದಿಗಳು ಸಾಗಲಿದೆ. ಪಾಂಚಜನ್ಯ ಗಣೇಶದ ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ನಗರದ ಗುಡ್ಡೇನಹಳ್ಳಿ ಬಳಿಯೂ ಕೂಡ ವಿಶೇಷವಾಗಿ ಚಕ್ರವರ್ತಿ ಮಹಾರಾಜ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ, ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ಕಾರ್ಯದರ್ಶಿ ವೇಣುಗೋಪಾಲ್, ವಿಜಯ್ ಕುಮಾರ್ ನಾರ್ವೆ, ಹಿಂದೂ ಜಾಗರಣ ವೇದಿಕೆಯ ಲೋಕೇಶ್, ವಿಶ್ವ ಹಿಂದೂ ಪರಿಷತ್ತು ವಿಭಾಗೀಯ ಕಾರ್ಯದರ್ಶಿ ಮಹಿಪಾಲ್, ಕಂಚಮಾರನಹಳ್ಳಿ ಕಾಂತಣ್ಣ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಿತಿ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸಮಿತಿಯ ಮೋಹನ್, ಮಹೇಶ್, ಲಾವಣ್ಯ, ಶ್ವೇತಾ, ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.