ಸಾರಾಂಶ
ಹಾವೇರಿ: ಶಾಸಕ ಬಸನಗೌಡ ಪಾಟೀಲ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದಕ್ಕೆ ಬೇಸರವಾಗಿದೆ. ಯತ್ನಾಳ ಕಡೆಯಿಂದಲೂ ತಪ್ಪಾಗಿರುವುದು ನಿಜ. ಆದರೂ ಬಿಜೆಪಿ ಹೈಕಮಾಂಡ್ ಯತ್ನಾಳ ಅವರ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯಬೇಕು.
ಇಲ್ಲದಿದ್ದರೆ ಸಮಾಜದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಹಾವೇರಿ ಪೀಠದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ್ ಮನವಿ ಮಾಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಹಿಂದೂ ಹುಲಿಯಾಗಿ, ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಯತ್ನಾಳ ಗುರುತಿಸಿಕೊಂಡಿದ್ದಾರೆ. ಯತ್ನಾಳ್ ಅವರ ಉಚ್ಚಾಟನೆಯ ಕ್ರಮ ಖಂಡನೀಯ. ಇದರಿಂದ ಬಿಜೆಪಿಗೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ಇದನ್ನು ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು. ಯತ್ನಾಳರ ಉಚ್ಚಾಟನೆಯಿಂದ ರಾಜ್ಯಾದ್ಯಂತ ಹಿಂದೂ ಕಾರ್ಯಕರ್ತರಿಗೆ ಬಹಳಷ್ಟು ನೋವಾಗಿದೆ.
ಇದನ್ನರಿತು ಕೇಂದ್ರ ಸಚಿವ ಸಮಿತಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಪರಿಶೀಲಿಸಿ ಉಚ್ಚಾಟನೆ ಆದೇಶವನ್ನು ಹಿಂಪಡೆದು ಪಕ್ಷಕ್ಕೆ ಗೌರವಯುತವಾಗಿ ಪುನಃ ಬರಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಬಿಜೆಪಿ ತನ್ನ ತತ್ವ ಸಿದ್ಧಾಂತಗಳನ್ನು ಮರೆತು ಹಿಂದೂ ಕಾರ್ಯಕರ್ತರನ್ನು ಹಿಂದೂಗಳ ಧ್ವನಿಯಾಗಿ ಮಾತನಾಡುವವರನ್ನು ಹತ್ತಿಕ್ಕುತ್ತಿರುವುದು ಖಂಡನೀಯ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗಲೂ ಪಂಚಮಸಾಲಿ ಸಮಾಜದ ಮಕ್ಕಳಿಗೆ 2ಎ ಸೌಲಭ್ಯ ಪಡೆಯುವ ಹಿನ್ನೆಲೆಯಲ್ಲಿ ಯತ್ನಾಳ ಹೋರಾಟ ಮಾಡಿದ್ದರು. ಅದು ಕೇವಲ ಸಮಾಜ ಒಳಿತಿಗಾಗಿ ನಡೆಸಿದ್ದು ಎಂಬುದನ್ನು ಎಲ್ಲರೂ ನೆನಪಿಡಬೇಕು.
ಇನ್ನು ಪಂಚಮಸಾಲಿ ಸಮಾಜದ ನಾಯಕರು ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದೆ. ಹೆಸರಿಗಷ್ಟೇ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ದೊಡ್ಡದಾಗಿದೆ, ಆದರೆ ಒಗ್ಗಟ್ಟಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಈ ನಿಟ್ಟಿನಲ್ಲಿ ಸಮಾಜದವರು ಒಗ್ಗಟ್ಟಾಗಿ ಈ ಹೋರಾಟಕ್ಕೆ ಬೆಂಬಲಿಸುವಂತೆ ಕೋರಿದರು.ಯತ್ನಾಳ ಅವರು ಮಾತಿನ ಭರದಲ್ಲಿ ಹೊಸ ಪಕ್ಷ ಸ್ಥಾಪನೆ ಕುರಿತು ಹೇಳಿಕೆ ನೀಡಿದ್ದು ನಿಜ. ಆದರೆ ನಂತರದಲ್ಲಿ ಹೊಸ ಪಕ್ಷ ಸ್ಥಾಪನೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಜೆಪಿ ನಾಯಕರು ನಮ್ಮ ಸಮಾಜದ ತಾಳ್ಮೆ ಪರೀಕ್ಷೆ ಮಾಡುವುದು ಬೇಡ. ಮುಂಬರುವ ದಿನಗಳಲ್ಲಿ ತಾಪಂ, ಜಿಪಂ, ನಗರ ಸ್ಥಳೀಯ ಸಂಸ್ಥೇಗಳ ಚುನಾವಣೆ ಎದುರಾಗಲಿದ್ದು, ಅದರ ಮೇಲೆ ಇದು ಪರಿಣಾಮ ಉಂಟುಮಾಡಲಿದೆ.
ಇದೇ ಸ್ಥಿತಿ ಮುಂದುವರಿದರೆ ನೀವು ಅಧಿಕಾರ ಕಳೆದುಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.ಅಲ್ಲದೆ ಯತ್ನಾಳ ಅವರನ್ನು ಬೆಂಬಲಿಸಿ ಪಂಚಮಸಾಲಿ ಪೀಠದ ಶ್ರೀಗಳು ಏ. 10ರ ವರೆಗೆ ಗಡುವು ನೀಡಿದ್ದು, ಅಷ್ಟರಲ್ಲಿ ಉಚ್ಚಾಟನೆ ವಾಪಸ್ ಪಡೆಯದೇ ಇದ್ದಲ್ಲಿ ಏ. 13ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಹಾಗೂ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಸಮಾಜದ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಯತ್ನಾಳ ಅವರನ್ನು ಬೆಂಬಲಿಸಿ ಕೆಲವೇ ದಿನಗಳಲ್ಲಿ ಹಾವೇರಿಯಲ್ಲೂ ವಿಭಿನ್ನವಾದ ಹೋರಾಟ ನಡೆಸಲಾಗುವುದು ಎಂದರು.ಪ್ರಮುಖರಾದ ಬಸವರಾಜ ಗಡೇಕರ, ವಿನಾಯಕ ಇಚ್ಚಂಗಿ, ಎಸ್.ಸಿ. ಸಿದ್ದನಗೌಡ್ರ, ಸಿ.ಪಿ. ಜಾವಗಲ್, ಶಿವಾನಂದ ಬಾಗೂರ, ಕೆ.ಬಿ. ಕಾಂತೇಶ್, ತಿಪ್ಪಣ್ಣ ಸುರದ, ಮಲ್ಲಿಕಾರ್ಜುನ ಪೂಜಾರ ಇತರರು ಇದ್ದರು.