ಸಾರಾಂಶ
ಹೊಸ ಪಕ್ಷ ಸ್ಥಾಪನೆ ಕುರಿತಂತೆ ಬರುವ ವಿಜಯದಶಮಿ ವೇಳೆಗೆ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ, ‘ನಾನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಿ ಎಂದು ಯಾರಿಗೂ ಕೈ ಮುಗಿಯಲ್ಲ, ಕೈಕಾಲು ಹಿಡಿಯಲ್ಲ’ ಎಂದಿದ್ದಾರೆ.
ವಿಜಯಪುರ : ಹೊಸ ಪಕ್ಷ ಸ್ಥಾಪನೆ ಕುರಿತಂತೆ ಬರುವ ವಿಜಯದಶಮಿ ವೇಳೆಗೆ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಹೇಳಿ ಕುತೂಹಲ ಹುಟ್ಟುಹಾಕಿದ್ದ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ, ‘ನಾನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಿ ಎಂದು ಯಾರಿಗೂ ಕೈ ಮುಗಿಯಲ್ಲ, ಕೈಕಾಲು ಹಿಡಿಯಲ್ಲ’ ಎಂದಿದ್ದಾರೆ.
ಅಲ್ಲದೆ, ‘ಮುಂದೆ ನಾನೇ ಸಿಎಂ ಆಗ್ತೀನಿ, 2028ಕ್ಕೆ ನಾನೇ ಸಿಎಂ ನೋಡ್ತಾ ಇರಿ’ ಎಂದು ಹೇಳಿ ಅಚ್ಚರಿಗೆ ಕಾರಣರಾಗಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಿ ಎಂದು ಕೈ ಮುಗಿಯಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ. ನನ್ನ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ. ನನ್ನ ಪರವಾಗಿ ಮಾತನಾಡೋಕೂ ತಯಾರಿದ್ದಾರೆ’ ಎಂದು ಹೇಳಿದರು.
‘ಅಲ್ಲದೆ, 2028ಕ್ಕೆ ನಾನು ಸಿಎಂ ಆಗ್ತಿನಿ. ಇಲ್ಲವೇ ಕೇವಲ ಶಾಸಕನಾಗಿ ಇರ್ತಿನಿ’ ಎಂದ ಅವರು, ‘ಈ ಹಿಂದೆ ಸಿಎಂ ಆಗಿದ್ದ ವೇಳೆ ಬಸವರಾಜ ಬೊಮ್ಮಾಯಿ ಅವರು ನನಗೆ ಮಂತ್ರಿ ಆಗಿ ಅಂದಿದ್ರು. ಆದರೆ, ನನಗೆ ಕಾರಿನ ಮೇಲೆ ಕೆಂಪು ಗೂಟ (ಲೈಟ್) ಹಾಕಿಕೊಂಡು ಅಡ್ಡಾಡುವ ಶೋಕಿ ಇಲ್ಲ.. ಹೀಗಾಗಿ ನಾನು ಅಭಿವೃದ್ಧಿಗೆ ಹಣ ಕೊಡಿ ಮಂತ್ರಿಗಿರಿ ಬೇಡ ಅಂದಿದ್ದೆ.’ ಎಂದೂ ಹೇಳಿದರು. ಮೃತನ ಕುಟುಂಬಕ್ಕೆ ಸಾಂತ್ವನ:
ಯತ್ನಾಳ ಉಚ್ಚಾಟನೆಯಿಂದ ಮನನೊಂದು ರಾಜೀನಾಮೆ ನೀಡಿದ್ದ ಸ್ಥಳೀಯ ಎಸ್ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ ತಟಗಾರ ಅವರು ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮಂಗಳವಾರ ಮೃತ ಬೆಂಬಲಿಗ ಸಂತೋಷ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ, ಧೈರ್ಯ ಹೇಳಿದರು. ಈ ವೇಳೆ ಯತ್ನಾಳ ಅವರ ಎದುರು ಸಂತೋಷ ಕುಟುಂಬಸ್ಥರು ಕಣ್ಣೀರು ಹಾಕಿದರು.