ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಪಂಚನ್ಯಾಯ ಜಾರಿ: ಶಾಸಕ ಟಿ.ಡಿ.ರಾಜೇಗೌಡ

| Published : Apr 12 2024, 01:15 AM IST / Updated: Apr 12 2024, 10:47 AM IST

ಸಾರಾಂಶ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿಗಳ ರೀತಿಯಲ್ಲಿ ಪಂಚನ್ಯಾಯ ಜಾರಿಗೆ ತರಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

  ನರಸಿಂಹರಾಜಪುರ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿಗಳ ರೀತಿಯಲ್ಲಿ ಪಂಚನ್ಯಾಯ ಜಾರಿಗೆ ತರಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ಗುರುವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಬ್ಬ ವಿದ್ಯಾವಂತ ಯುವಕನಿಗೆ 1 ಲಕ್ಷ ನೀಡುವ ಯುವ ನ್ಯಾಯ, ರೈತ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆ ನೀಡುವ ರೈತನ್ಯಾಯ, ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ 1 ಲಕ್ಷ ನೀಡುವ ಮಹಿಳಾ ನ್ಯಾಯ, ದಿನಕ್ಕೆ 400 ರು. ಕನಿಷ್ಠ ವೇತನ ನೀಡುವ ಶ್ರಮಿಕ ನ್ಯಾಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಖಚಿತಪಡಿಸಿಕೊಳ್ಳಲು ಜಾತಿಗಣತಿ ಮಾಡಿ ಪಾಲುದಾರಿಕೆಯ ನ್ಯಾಯ ಜಾರಿಗೊಳಿಸಲಾಗುವುದು ಎಂದರು.

ಈ ಗ್ಯಾರಂಟಿ ಕಾರ್ಡ್ ವಿತರಿಸುವ ಜತೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಯೋಜನೆಗಳ ಬಗ್ಗೆ ಮನೆ, ಮನೆಗೆ ಭೇಟಿ ಯಾವ, ಯಾವ ಯೋಜನೆ ಸೌಲಭ್ಯ ಪಡೆಯುತ್ತಿದ್ದಾರೆ. ಸೌಲಭ್ಯ ದೊರೆಯದಿದ್ದರೆ ಅದನ್ನು ಕೊಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿ ಮತಯಾಚಿಸಲಾಗುವುದು. ರಾಜ್ಯದ ಕಾಂಗ್ರೆಸ್ ಸರ್ಕಾರ ಈಗಾಗಲೇ ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ. ಒತ್ತುವರಿ ಜಮೀನನ್ನು 30 ವರ್ಷದವರೆಗೆ ಗುತ್ತಿಗೆ ನೀಡುವ ಪದ್ಧತಿಯನ್ನು ಸರ್ಕಾರ ಈಗಾಗಲೇ ಜಾರಿಗೊಳಿಸಿದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಜನಪರ ಕಾಳಜಿ ಉಳ್ಳ, ಪ್ರಾಮಾಣಿಕರಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಇವರ ಗೆಲುವಿನಿಂದ ಜಿಲ್ಲೆಯ ಹಲವು ಜ್ವಲಂತ ಸಮಸ್ಯೆ ಬಗೆಹರಿಸಲು ಸಹಾಯಕವಾಗಲಿದೆ ಎಂದರು.

ಈಗಾಗಲೇ ಮೂರು ತಾಲೂಕುಗಳಲ್ಲೂ ಕಾರ್ಯಕರ್ತರ ಸಭೆ ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಇದೇ 12 ರಿಂದ ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಮುಖಂಡರು ಮನೆ, ಮನೆಗೆ ತೆರಳಿ ಸರ್ಕಾರ ಯೋಜನೆಗಳ ಮತದಾರರಿಗೆ ಅರಿವು ಮೂಡಿಸಿ ಮತಯಾಚನೆ ಮಾಡಲಿದ್ದಾರೆ. ಬಿಜೆಪಿ ಜಾತಿ, ಮತ, ಧರ್ಮದ ಆಧಾರದ ಮೇಲೆ ಜನರ ಭಾವನೆಗಳನ್ನು ಕೆರಳಿಸಿ ಮತಯಾಚಿಸಿದರೆ, ಕಾಂಗ್ರೆಸ್ ಜನರ ಬದುಕನ್ನು ರೂಪಿಸುವ ಯೋಜನೆಗಳನ್ನು ಆಧಾರ ವಾಗಿಟ್ಟು ಕೊಂಡು ಮತಯಾಚಿಸಲಿದೆ. ಮತದಾರರು ಬದುಕು ರೂಪಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇದೇ 15 ರ ಸೋಮವಾರ ಬಾಳೆಹೊನ್ನೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಲೋಕಸಭಾ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕೆಂದು ಮನವಿ ಮಾಡಿದರು.ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರಾಮಾಣಿಕತೆ ಮತ್ತು ಸರಳ ಸಜ್ಜನಿಕೆಗೆ ಇನ್ನೊಂದು ಹೆಸರೇ ಜಯಪ್ರಕಾಶ್ ಹೆಗ್ಡೆ. ಇಂತಹ ವ್ಯಕ್ತಿ ಕ್ಷೇತ್ರದ ಸಂಸದರಾಗುವುದು ಕ್ಷೇತ್ರದ ಪುಣ್ಯ. ಇವರು ಮಾಡಿರುವ ಉತ್ತಮ ಕೆಲಸಗಳಿಂದ ಜನಮಾನಸದಲ್ಲಿ ಉಳಿದಿದ್ದಾರೆ. ಬಿಜೆಪಿಯಿಂದ ಸಂಸದರಾಗಿದ್ದ ಶೋಭಾ ಕರಂದ್ಲಾಜೆ ಅವರು ಕ್ಷೇತ್ರಕ್ಕೆ ಭೇಟಿ ನೀಡದೆ ಜನರ ಸಮಸ್ಯೆ ಆಲಿಸಿಲ್ಲ. ಹಾಗಾಗಿ ಬಿಜೆಪಿ ಕಾರ್ಯಕರ್ತರೇ ಅವರ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ಆರಂಭಿಸಿದರು . ಜನಪರ ಕಾಳಜಿಯುಳ್ಳ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣ ವಿದ್ದು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.

ಅಧ್ಯಕ್ಷತೆಯನ್ನು ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಶೆಟ್ಟಿ, ಆರ್.ಸದಾಶಿವ,ಎಸ್.ಡಿ.ರಾಜೇಂದ್ರ, ಎಚ್.ಎಂ.ಮನು, ಮಾಳೂರು ದಿಣ್ಣೇರಮೇಶ್, ಕಾಫಿ ಗಿರೀಶ್, ಸುನಿಲ್ ಕುಮಾರ್, ಎಲ್ದೋಸ್, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.