ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದಲ್ಲಿ ಏ. 27ರಂದು ಬೆಳಗ್ಗೆ 10.30ಕ್ಕೆ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಜ. ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜ. ಪ್ರಸನ್ನ ರೇಣುಕ ಡಾ. ವೀರಸೋಮೆಶ್ವರ ಭಗವತ್ಪಾದರು ಹೇಳಿದರು.
ಶನಿವಾರ ಸಂಜೆ ಇಲ್ಲಿನ ವಿದ್ಯಾನಗರದ ಶ್ರೀ ರಂಭಾಪುರಿ ಸಮುದಾಯ ಭವನದಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವದ ಬಿತ್ತಿಪತ್ರ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಸುಳ್ಳ ಗ್ರಾಮದಲ್ಲಿ ಏ. 23ರಿಂದ ಏ. 28ರ ವರೆಗೆ ಜಾತ್ರಾಮಹೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಏ. 27ರಂದು ಬೆಳಗ್ಗೆ 10.30ಕ್ಕೆ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಲಿದೆ ಎಂದರು.
ಗ್ರಾಮದಲ್ಲಿ ಪುನರ್ ನಿರ್ಮಾಣಗೊಂಡ ಕಲ್ಮೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ, ಶ್ರೀ ಗುರು ಸಿದ್ಧರಾಮೇಶ್ವರ ಮಂಗಲ ಭವನ ಉದ್ಘಾಟನೆ, ಕಲ್ಮೇಶ್ವರ ಪಾಲಕಿ ಉತ್ಸವ ಹಾಗೂ ಮಹಾರಥೋತ್ಸವ ಮತ್ತು ಜೀವನ ದರ್ಶನ ಪ್ರವಚನ- ಧರ್ಮ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.ಇದೇ ಪ್ರಥಮ ಬಾರಿಗೆ ಗ್ರಾಮದಲ್ಲಿ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುತ್ತಿದೆ. ನಾಡಿನ ಅನೇಕ ಶಿವಾಚಾರ್ಯರು, ಪಂಚ ಪೀಠದ ಜಗದ್ಗುರುಗಳು ಮತ್ತು ಸಾಧಕರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವಳಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಧರ್ಮಾಭಿಮಾನಿಗಳು, ಭಕ್ತರು ಪಂಚಗೃಹ ಹಿರೇಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಧಾರ್ಮಿಕ ಜಾಗೃತಿ ಯಶಸ್ವಿಗೊಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಳ್ಳ ಪಂಚಗೃಹ ಹಿರೇಮಠದ ಪಟ್ಟಾಧ್ಯಕ್ಷ ಶಿವ ಸಿದ್ಧರಾಮೇಶ್ವರ ಶಿವಚಾರ್ಯರು ಆಶೀರ್ವಚನ ನೀಡಿದರು. ಈ ವೇಳೆ ಹಳ್ಯಾಳ ಮತ್ತು ಹಳೆ ಹುಬ್ಬಳ್ಳಿ ಹಿರೇಮಠದ ನಿಯೋಜಿತ ಉತ್ತರಾಧಿಕಾರಿ ರೇಣುಕ ಪ್ರಸಾದ ದೇವರು, ಶ್ರೀ ಮದ್ವೀರಶೈವ ಸದ್ಭೋದನಾ ಸಂಸ್ಥೆಯ ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಪ್ರಕಾಶ ಬೆಂಡಿಗೇರಿ, ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಹಾಗೂ ಹೆಸ್ಕಾಂ ಹುಬ್ಬಳ್ಳಿ ಗ್ರಾಮೀಣ ವೃತ್ತದ ಎಇಇ ಕಿರಣಕುಮಾರ ಸೇರಿದಂತೆ ಹಲವರಿದ್ದರು. ಇಂದುಮತಿ ಮಾನ್ವಿ ಸ್ವಾಗತಿಸಿದರು. ಪ್ರಭಾವತಿ ಹಿರೇಮಠ ಹಾಗೂ ವಾಣಿಶ್ರೀ ಹಿರೇಮಠ ನಿರೂಪಿಸಿದರು. ಜಿವಿ ಕಲಾ ಬಳಗದ ಅಧ್ಯಕ್ಷ ಗದಗಯ್ಯ ಹಿರೇಮಠ ವಂದಿಸಿದರು.