ಸಾರಾಂಶ
ಕನ್ನಡಪ್ರಭ ವಾರ್ತೆ, ಉಡುಪಿ
ರಾಜ್ಯದಲ್ಲಿ ಸುಮಾರು 6,000 ಗ್ರಾ.ಪಂ.ಗಳಲ್ಲಿ ಸಿಬ್ಬಂದಿ ಮುಷ್ಕದಿಂದ ಆಡಳಿತ ವ್ಯವಸ್ಥೆ ಸ್ಥಗಿತ ಆಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಮುಷ್ಕರನಿರತರನ್ನು ಕರೆದು ಸಮಸ್ಯೆ ಬಗೆಹರಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ.ಮುಷ್ಕರನಿರತರನ್ನು ಭೇಟಿಯಾದ ಸಂಸದರು ಮಾತನಾಡಿ, ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ನೀರು ಸರಬರಾಜು ಸಿಬ್ಬಂದಿ, ಸ್ವಚ್ಛತಾ ಕಾರ್ಯಕರ್ತರ ಸಹಿತ ಇಡೀ ಪಂಚಾಯತಿಯ ಕಾರ್ಯಾಂಗವೇ ಕೆಲಸ ಸ್ಥಗಿತಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್, ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ವಾರಗಟ್ಟಲೆ ಪಂಚಾಯತ್ ರಾಜ್ ಆಡಳಿತ ಸ್ಥಗಿತವಾಗಿದ್ದರೂ ಸರ್ಕಾರ ಮೌನ ವಹಿಸಿದೆ. ಇದ ಸರಿಯಲ್ಲ ಎಂದರು. ಪಂಚಾಯಿತಿ ಸಿಬ್ಬಂದಿ ಸರಳವಾದ ಬೇಡಿಕೆ ಮುಂದಿಟ್ಟಿದ್ದಾರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬಿ- ದರ್ಜೆ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸುತಿದ್ದಾರೆ. ಆರೇಳು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ಕೌನ್ಸಿಲ್ ಮೂಲಕ ವರ್ಗಾಯಿಸಬೇಕೆಂಬ ಅವರ ಬೇಡಿಕೆ ಅರ್ಥಪೂರ್ಣವಾಗಿದೆ. ಜೇಷ್ಠತೆ ಪಟ್ಟಿಯನ್ನು ವಿಳಂಬವಿಲ್ಲದೆ ಅಂತಿಮಗೊಳಿಸಿ, ಭಡ್ತಿ ಕ್ರಮ ಕೈಗೊಳ್ಳಬೇಕೆಂಬ ಸಿಬ್ಬಂದಿ ಆಗ್ರಹ ಪರಿಗಣಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಮತ್ತು ವೃಂದ ನೇಮಕಾತಿ ನಿಯಮಗಳನ್ನು ಸರ್ಕಾರ ರಚಿಸಬೇಕು. ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್ ಗಳು, ನೀರುಗಂಟಿ ಜವಾನ ಮತ್ತು ಸ್ವಚ್ಛತೆಗಾರರ ವೇತನ ಪರಿಷ್ಕರಣೆಯನ್ನು ಸರ್ಕಾರ ಮಾನವೀಯ ನೆಲೆಯಲ್ಲಿ ಮಾಡಬೇಕು. ಈ ಸರಳವಾದ ಬೇಡಿಕೆಯನ್ನು ಆದ್ಯತೆಯ ಮೇಲೆ ಸರ್ಕಾರ ಕೈಗೆತ್ತಿಕೊಳ್ಳಬೇಕು ಎಂದವರು ಸಲಹೆ ಮಾಡಿದ್ದಾರೆ.
ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ ವಿಧಾನಸೌಧದಲ್ಲಿ ತುರ್ತು ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.