ಪಂಚಮಸಾಲಿ ಸಮಾಜ ಸಂಘಟನೆ ಅಗತ್ಯ

| Published : Sep 11 2024, 01:04 AM IST

ಸಾರಾಂಶ

ರಾಜ್ಯದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದರೂ ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ವರ್ಗವಾಗಿದೆ

ಶಿರಹಟ್ಟಿ: ಪಂಚಮಸಾಲಿ ಸಮಾಜವನ್ನು ರಾಜ್ಯದಲ್ಲಿ ಸಾಮಾಜಿಕ,ಶೈಕ್ಷಣಿಕ, ರಾಜಕೀಯವಾಗಿ ಬಲಿಷ್ಠಗೊಳಿಸಲು ರಾಜ್ಯಾಧ್ಯಕ್ಷನಾಗಿ ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸಮಾಜ ಸಂಘಟನೆ ಮಾಡುತ್ತೇನೆ. ನಮ್ಮ ಸಮಾಜದ ಧ್ಯೇಯೋದ್ದೇಶ ಪ್ರತಿ ಮನೆ ಮನೆಗಳಲ್ಲಿ ಪ್ರಚುರಪಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ರಾಜ್ಯಾಧ್ಯಕ್ಷ ಸೋಮನಗೌಡ್ರ ಮಾಲಿಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಶಿಕ್ಷಕರ ಸಂಘದ ಸಭಾಭವನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ರಾಜ್ಯದಲ್ಲಿ ಈಗಾಗಲೇ ಪಂಚಮಸಾಲಿ ನೋಂದಣಿ ಸಂಖ್ಯೆ ೧೫ ಸಾವಿರದಷ್ಟು ಇದೆ. ಒಂದು ವರ್ಷದಲ್ಲಿ ಒಂದು ಲಕ್ಷ ಜನರ ನೋಂದಣಿ ಅಭಿಯಾನ ಕಾರ್ಯ ಮಾಡುವ ವಿಶ್ವಾಸವಿದೆ. ರಾಜ್ಯದಲ್ಲಿ ಸಾಕಷ್ಟು ಜನಸಂಖ್ಯೆ ಇದ್ದರೂ ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ವರ್ಗವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಂದು ಬ್ರಿಟಿಷ್ ಅಧಿಕಾರಿಯಾಗಿದ್ದ ಕ್ಯಾಥರೆ ವಿರುದ್ಧ ಜಯ ಸಾಧಿಸಿ ೨೦೦ವರ್ಷಗಳು ಪೂರ್ಣಗೊಂಡ ಹಿನ್ನೆಲೆ ವೀರ ರಾಣಿ ಕಿತ್ತೂರು ಚೆನ್ನಮ್ಮನ ನಾಡಿನಲ್ಲಿ ಅದ್ಭುತ ಹಾಗೂ ಅಭೂತಪೂರ್ವ ಕಾರ್ಯಕ್ರಮ ನಡೆಯಲಿದ್ದು, ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು.ವಿಜಯೋತ್ಸವದ ಒಂದು ವರ್ಷದ ಅವಧಿಯಲ್ಲಿ ವೀರರಾಣಿ ಚೆನ್ನಮ್ಮಳ ಜ್ಯೋತಿಯಾತ್ರೆ ರಾಜ್ಯದ ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಸಂಚರಿಸಲಿದೆ ಎಂದು ಹೇಳಿದರು.

ಪೀಠಗಳು ಹುಟ್ಟುವ ಮೊದಲೇ ನಮ್ಮ ಸಂಘ ಹುಟ್ಟಿದೆ.ಸಂಘಕ್ಕೆ ೩೧ ವರ್ಷಗಳು ತುಂಬಿದೆ. ರಾಜ್ಯದಲ್ಲಿ ೮೪ ಲಕ್ಷ ಜನರ ಸಹಕಾರ ನಮಗೆ ಅಗತ್ಯವಿದೆ. ಇಷ್ಟು ದೊಡ್ಡ ಜನಸಂಖ್ಯೆ ಇರುವ ನಮ್ಮ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ೨೫ ಶಾಸಕರನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಮಾಜದಲ್ಲಿ ಐಎಎಸ್ ಹಾಗೂ ಕೆಎಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಶಿಬಿರ ಹಮ್ಮಿಕೊಳ್ಳುವ ಉದ್ದೇಶವಿದ್ದು, ಇದಕ್ಕಾಗಿ ಸಂಘದ ಸಹಾಯ ಸಹಕಾರ ಅಗತ್ಯವಿದೆ. ಸಂಘಟನೆ ದೃಷ್ಟಿಯಲ್ಲಿ ಹಾಗೂ ಸಮಾಜದ ಒಳತಿಗಾಗಿ ಎಲ್ಲರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಶ್ರೀಗಳನ್ನು ಹಾಗೂ ರಾಜಕಾರಣಿಗಳನ್ನು ದೂರವಿಟ್ಟು ಶ್ರಮಿಸಬೇಕು ಎಂದರು.

ತಾಲೂಕು ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಬಸವರಾಜ ತುಳಿ ಮಾತನಾಡಿ, ದೊಡ್ಡ ಇತಿಹಾಸ ಹೊಂದಿರುವ ಹಾಗೂ ಅತ್ಯಂತ ದೊಡ್ಡ ಪ್ರಮಾಣದಲ್ಲಿರುವ ಪಂಚಮಸಾಲಿ ಸಮಾಜ ಹಲವಾರು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ರಾಜಕೀಯ ನಾಯಕರ ಇಚ್ಚಾಶಕ್ತಿ ಕೊರತೆಯಿಂದ ಅಭಿವೃದ್ಧಿಯಿಂದ ವಂಚಿತಗೊಂಡಿದೆ ಎಂದು ಆರೋಪಿಸಿದರು.

ಸಂಘಟನೆಯಿಂದ ಮಾತ್ರ ಶಕ್ತಿ ಬರಲು ಸಾಧ್ಯ. ಸುಮ್ಮನಿದ್ದರೆ ಸರ್ಕಾರ ಕಣ್ಣು ತಗೆಯುವುದಿಲ್ಲ. ನಮ್ಮ ಧ್ವನಿ ವಿಧಾನಸಭೆ ತಲುಪಬೇಕು. ಅದಕ್ಕಾಗಿ ಸಂಘಟನೆ ಮತ್ತು ಹೋರಾಟ ಅನಿವಾರ್ಯ. ಸರ್ಕಾರ ವೀರಶೈವ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಇದರಿಂದ ಸಮಾಜದ ಮಕ್ಕಳಿಗೆ ಯಾವುದೇ ಸಹಾಯ ಸೌಲಭ್ಯ ದೊರೆಯುತ್ತಿಲ್ಲ. ಇನ್ನು ಮುಂದೆ ಪ್ರಾಧಿಕಾರದಿಂದ ಸೌಲಭ್ಯ ಪಡೆಯಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.

ಫಕೀರೇಶ ಕಲ್ಯಾಣಿ, ರಾಮಣ್ಣ ಕಮತ, ಬಸವಣ್ಣೆಪ್ಪ ತುಳಿ, ಎಚ್.ಎಂ.ದೇವಗಿರಿ, ಎಸ್.ಬಿ.ಹೊಸೂರ, ಯಲ್ಲಪ್ಪ ಇಂಗಳಗಿ, ಬಸವರಾಜ ಅಕ್ಕಿ, ಬಸವರಾಜ ಚಿಕ್ಕತೋಟ, ಮಹೇಶ ದಾವಣೆಗೆರೆ, ಸೋಮಣ್ಣ ಡಾಣಗಲ್, ಸುರೇಶ ವರವಿ, ಮಲ್ಲಿಕಾರ್ಜುನ ಕಬಾಡಿ ಮತ್ತಿತರರು ಉಪಸ್ಥಿತರಿದ್ದರು.