ಸಾರಾಂಶ
ಜು. 23ರಂದು ಬೆಂಗಳೂರಿನಲ್ಲಿ ಸಮಾಜದ ವಕೀಲರ ಬೃಹತ್ ಸಭೆ ಕರೆಯಲಾಗಿದೆ. ಅದೇ ದಿನ ಸಮಾಜದ ಹಿರಿಯ ವಕೀಲರ ತಂಡ ರಚನೆ ಮಾಡಲಾಗುವುದು. ಸಭೆ ಬಳಿಕ ಹಿಂದುಳಿದ ವರ್ಗಗಳ ಆಯೋಗ, ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿ:
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಎಲ್ಲ ಲಿಂಗಾಯತ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಕಾನೂನಾತ್ಮಕ ಹೋರಾಟ ನಡೆಸಲು ಬೆಂಗಳೂರಿನಲ್ಲಿ ಜು. 23ರಂದು ಸಮಾಜದ ವಕೀಲರ ರಾಜ್ಯಮಟ್ಟದ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಂಚಮಸಾಲಿ ಸಮಾಜದ ವಕೀಲರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜು. 23ರಂದು ಬೆಂಗಳೂರಿನಲ್ಲಿ ಸಮಾಜದ ವಕೀಲರ ಬೃಹತ್ ಸಭೆ ಕರೆಯಲಾಗಿದೆ. ಅದೇ ದಿನ ಸಮಾಜದ ಹಿರಿಯ ವಕೀಲರ ತಂಡ ರಚನೆ ಮಾಡಲಾಗುವುದು. ಸಭೆ ಬಳಿಕ ಹಿಂದುಳಿದ ವರ್ಗಗಳ ಆಯೋಗ, ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುವುದು. ಜಿಲ್ಲಾ, ತಾಲ್ಲೂಕು ಮಟ್ಟದದಲ್ಲಿ ವಕೀಲರ ಸಂಘದ ಮೂಲಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಈ ಹಿಂದೆ ಹೋರಾಟ ನಡೆಸಿದಾಗ ಸಮಾಜದ ವಕೀಲರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಈಗ ವಕೀಲರ ಸಭೆ ಕರೆದು ಅವರ ಬೆಂಬಲ ಕೋರಲಾಗಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದರು.
ಗುರುವಾರ ನಡೆದ ವಕೀಲರ ಸಭೆಯಲ್ಲಿ ಮೀಸಲಾತಿ ಹೋರಾಟಕ್ಕಾಗಿ ಬೆಂಗಳೂರಿನಲ್ಲಿ ಸಭೆ ನಡೆಸುವುದು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾಜದ ವಕೀಲರ ಸಂಘಟನೆ ಮಾಡುವುದು, ಕಾನೂನಾತ್ಮಕ ಹೋರಾಟಕ್ಕೆ ವಕೀಲರ ತಂಡ ರಚನೆ ಮಾಡಬೇಕು ಎಂಬ ಮೂರು ನಿರ್ಣಯಗಳನ್ನು ನಿರ್ಣಯ ಕೈಗೊಳ್ಳಲಾಯಿತು.21ಕ್ಕೆ ಪದಗ್ರಹಣ:
ಇನ್ನು ಸಮಾಜದ ಪಂಚಸೇನೆಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು. 21ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಲಿಂಗಾಯತ ಸಮಾಜದ ಉಳಿದ ಒಳಪಂಗಡಗಳಿಗೆ ಮೀಸಲಾತಿ ನೀಡಿದರೂ ನಮ್ಮ ಬೆಂಬಲ ಇದೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಆ ಸಮಾಜದವರು 10 ವರ್ಷ ಹೋರಾಟ ನಡೆಸಿದರು. ನಮಗೂ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಶ್ರೀಗಳು ಹೇಳಿದರು.ಮೊದಲ ಸಭೆ:
ಇದಕ್ಕೂ ಮುನ್ನ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕಾನೂನು ಹೋರಾಟ ನಡೆಸಲು ಪೂರ್ವಭಾವಿಯಾಗಿ ಉತ್ತರ ಕರ್ನಾಟಕ ಭಾಗದ ಪಂಚಮಸಾಲಿ ವಕೀಲರ ಸಭೆಯನ್ನು ನಗರದಲ್ಲಿ ಗುರುವಾರ ನಡೆಸಲಾಯಿತು. ಸಭೆಯಲ್ಲಿ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 2ಎ ಮೀಸಲಾತಿಗಾಗಿ ಸಮಾಜದ ವಕೀಲರು ಒಗ್ಗಟ್ಟಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಹುಬ್ಬಳ್ಳಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ. ನರಗುಂದ ಮಾತನಾಡಿ, ನ್ಯಾಯಯುತ ಬೇಡಿಕೆಗಾಗಿ ಸಮಾಜದ ಸ್ವಾಮೀಜಿ ಅವಿರತವಾಗಿ ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ವಕೀಲರು ಬೆಂಬಲ ನೀಡಲಿದ್ದಾರೆ ಎಂದರು.
ವಕೀಲರಾದ ಆರ್.ಜಿ. ಕೊಡ್ಲಿ, ಎ.ವಿ. ಬಳಿಗಾರ, ಹನುಮಂತ ಶಿಗ್ಗಾಂವ, ಎಸ್.ಎಸ್. ನಾಗನಗೌಡ್ರ, ಬಾಪುಗೌಡ ಶಾಬಾಳದ, ವೈ.ಬಿ. ಮುದಿಗೌಡ್ರ, ಸಾವಿತ್ರಿ ಪೊಲೀಸ್‌ಗೌಡ್ರ, ಸಾವಿತ್ರಿ ಅನಾಮಿ, ಸಿ.ವಿ. ಹೊಂಬಾಳ, ಸುಜಾತಾ ಗೋವನಕೊಪ್ಪ, ವಿ.ಟಿ. ಕುಲಕರ್ಣಿ. ಜಿ.ಆರ್. ಪಾಟೀಲ, ಎಸ್.ಎಸ್. ಕೋಟಗಿ, ಜಿ.ಎಫ್. ಸಂಕಣ್ಣವರ, ವಿಜಯಲಕ್ಷ್ಮಿ ವಾಲಿ, ಪಿ.ಎಸ್. ನರೇಗಲ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪಂಚಮಸಾಲಿ ಸಮಾಜದ 250ಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ದರು.