ಕುಟುಂಬಕ್ಕಿಂತಲೂ ಪುಸ್ತಕಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದ ‘ಪುಸ್ತಕ ಮನೆ’ ಖ್ಯಾತಿಯ ಅಂಕೇಗೌಡರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ. ತನ್ನ ನೌಕರಿಯನ್ನೇ ಪುಸ್ತಕಕ್ಕಾಗಿ ತ್ಯಾಗ ಮಾಡಿದ ಅಂಕೇಗೌಡರು ದಶಕಗಳ ಕಾಲ ಪುಸ್ತಕಗಳನ್ನು ಪ್ರೀತಿಸಿದ್ದಕ್ಕೆ ಇಂದು ‘ಪದ್ಮಶ್ರೀ’ ಲಭಿಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕುಟುಂಬಕ್ಕಿಂತಲೂ ಪುಸ್ತಕಗಳನ್ನೇ ಹೆಚ್ಚು ಪ್ರೀತಿಸುತ್ತಿದ್ದ ‘ಪುಸ್ತಕ ಮನೆ’ ಖ್ಯಾತಿಯ ಅಂಕೇಗೌಡರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ.

ತಾಲೂಕಿನ ಚಿನಕುರಳಿ ಗ್ರಾಮದಲ್ಲಿ 1949ರ ಅಕ್ಟೋಬರ್ 17ರಂದು ತಂದೆ ಮರೀಗೌಡ, ತಾಯಿ ನಿಂಗಮ್ಮರ ಪುತ್ರನಾಗಿ ಬಡ ರೈತ ಕುಟುಂಬದಲ್ಲಿ ಜನಿಸಿದ ಅಂಕೇಗೌಡರು ಹರಳಹಳ್ಳಿ ಗ್ರಾಮದಲ್ಲಿ ‘ಪುಸ್ತಕ ಮನೆ’ ಆರಂಭಿಸಿದಾಗ ಎದುರಾದ ಕಷ್ಟಗಳು ಅಷ್ಟಿಷ್ಟಲ್ಲ. ತನ್ನ ನೌಕರಿಯನ್ನೇ ಪುಸ್ತಕಕ್ಕಾಗಿ ತ್ಯಾಗ ಮಾಡಿದ ಅಂಕೇಗೌಡರು ದಶಕಗಳ ಕಾಲ ಪುಸ್ತಕಗಳನ್ನು ಪ್ರೀತಿಸಿದ್ದಕ್ಕೆ ಇಂದು ‘ಪದ್ಮಶ್ರೀ’ ಲಭಿಸಿದೆ.

ಮೊದಲು ಸಣ್ಣ ಸಣ್ಣ ಪುಸ್ತಕಗಳ ಸಂಗ್ರಹ ಆರಂಭ:

ಅಂಕೇಗೌಡರ ಪುಸ್ತಕ ಸಂಗ್ರಹ ಆರಂಭವಾದುದ್ದು ಬಿ.ಎ.ಓದುತ್ತಿದ್ದ ದಿನಗಳಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಪ್ರೆಸ್‌ನಲ್ಲಿ ಉ.ಕಾ. ಸುಬ್ಬರಾಯಾಚಾರ್ ಅವರು ಅಧಿಕಾರದಲ್ಲಿದ್ದಾಗ ಬಡ ವಿದ್ಯಾರ್ಥಿಗಳಿಗಾಗಿದ್ದ ಅರ್ನ್ ಅಂಡ್ ಲರ್ನ್ ಯೋಜನೆಯಡಿ ಕೆಲಸ ಮಾಡಿ ಬಂದ 5 ರು. ಹಣದಲ್ಲಿ ರಾಮಕೃಷ್ಣ ಮಿಷನ್ ಪ್ರಕಟಣೆಯ ಸಣ್ಣ ಸಣ್ಣ ಪುಸ್ತಕಗಳನ್ನು ಕೊಳ್ಳುವ ಮೂಲಕ ಸಂಗ್ರಹ ಆರಂಭಿಸಿದರು. ಆರಂಭದಲ್ಲಿ ನಿಧಾನವಾಗಿ ನಡೆದ ಈ ಕಾರ್ಯ ಆ ನಂತರ ಪುಸ್ತಕದಾಹ ತೀರಿಸಿಕೊಳ್ಳುವ ಭರದಲ್ಲಿ ಸಾಗಿತ್ತು. ಎಂ.ಎ.ಪದವಿ ಪಡೆದು ಸಾಹಿತ್ಯದ ವಿದ್ಯಾರ್ಥಿಯಾದರೂ ಅಂಕೇಗೌಡರು ಸೇರಿದ್ದು ಪಾಂಡವಪುರದ ಸಹಕಾರ ಸಕ್ಕರೆ ಕಾರ್ಖಾನೆ ಸಾಮಾನ್ಯ ದಿನಗೂಲಿ ನೌಕರನಾಗಿ. ಕಾಲ ಕ್ರಮೇಣ ಮೇಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ತಮ್ಮ ಸಂಬಳದ ಶೇ.60ರಷ್ಟು ಭಾಗವನ್ನು ಪುಸ್ತಕ ಖರೀದಿಗೆ ಮೀಸಲಿಟ್ಟರು. ಪುಸ್ತಕಗಳ ಖರೀದಿಯಿಂದ ಗ್ರಂಥ ರಾಶಿಯೇ ಸೃಷ್ಟಿಯಾಯಿತು.

ಪುಸ್ತಕಗಳನ್ನು ಕಾಪಾಡುವ ದೃಷ್ಟಿಯಿಂದ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡು ಪುಸ್ತಕಗಳ ಪೋಷಣೆಯಲ್ಲಿ ತೊಡಗಿದರು.

ಪಾಂಡವಪುರ ವಿಶ್ವೇಶ್ವರನಗರದ ನಾಲ್ಕೂವರೆ ಚದರದ ಅವರ ಪುಟ್ಟ ಮನೆಯಲ್ಲಿ ಪುಸ್ತಕದ ರಾಶಿ ಇಡೀ ಮನೆಯನ್ನೇ ಆವರಿಸಿತ್ತು. ಅವರ ಮನೆಯನ್ನು ನೋಡುತ್ತಿದ್ದವರಿಗೆ ಅದೊಂದು ಪುಸ್ತಕದ ಮೆದೆ ಎನಿಸುತ್ತಿತ್ತು. ಪುಸ್ತಕಗಳ ಬೃಹತ್ ಸಂಗ್ರಹ ಹೊಂದಿರುವ ಅಂಕೇಗೌಡರಿಗೆ ಅವುಗಳ ರಕ್ಷಣೆ ಕೂಡ ದೊಡ್ಡ ಸವಾಲು ಹಾಗೂ ಜವಾಬ್ದಾರಿಯಾಗಿತ್ತು.

ಪುಸ್ತಕಗಳ ಸಂಗ್ರಹಕ್ಕೆ ನೆರವಾದ ಉದ್ಯಮಿ:

ಉದ್ಯಮಿಯಾಗಿದ್ದ ಹರಿಖೋಡೆ ಅವರು ಆಕಸ್ಮಿಕವಾಗಿ ಅಂಕೇಗೌಡರ ಮನೆಗೆ ಭೇಟಿ ನೀಡಿದ ವೇಳೆ ಪುಸ್ತಕ ಸಂಗ್ರಹ ನೋಡಿ ಬೆರಗಾದರು. ಪುಸ್ತಕಗಳ ರಕ್ಷಣೆಗೆ ಸಹಾಯದ ಭರವಸೆ ನೀಡಿ 2005ರಲ್ಲಿ 12 ಲಕ್ಷ ರು. ಮೌಲ್ಯದ ನಿವೇಶನ ಖರೀದಿಸಿ ಅಂಕೇಗೌಡ ಜ್ಞಾನ ಪ್ರತಿಷ್ಠಾನದ ಅಡಿ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಬೃಹತ್ ಗ್ರಂಥಾಲಯ ನಿರ್ಮಿಸಿಕೊಟ್ಟರು. ನಂತರ ಗ್ರಂಥಾಲಯವೇ ಈಗ ಅಂಕೇಗೌಡ ‘ಪುಸ್ತಕ ಮನೆ’ ಎಂಬ ಹೆಸರಿನಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿದೆ.

ಸುಮಾರು 15 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಣೆಯಾಗಿದ್ದು, ಪ್ರಪಂಚದ ವಿವಿಧ ಜ್ಞಾನ ಕ್ಷೇತ್ರಗಳ ಪುಸ್ತಕಗಳು ಇಲ್ಲಿ ಅಡಕವಾಗಿವೆ. ಪುಸ್ತಕ ಸಂಗ್ರಹದ ಜೊತೆಗೆ ದೇಶ ವಿದೇಶಗಳ ವೈವಿದ್ಯಮಯ ಹಾಗೂ ಅಪರೂಪದ ನಾಣ್ಯಗಳು, ಅಂಚೆ ಚೀಟಿಗಳು, ಶುಭಾಶಯ ಪತ್ರಗಳು, ಹಳೆಯ ಕ್ಯಾಮೆರಾಗಳು, ಭೂಪಟಗಳು, ಇತ್ಯಾದಿಗಳಿಂದ ಕೂಡಿರುವ ಸಂಗ್ರಹ ಅವರ ಹವ್ಯಾಸದ ಬಹುಮುಖತೆ ನಮಗೆ ಪರಿಚಯಿಸುತ್ತದೆ. ಇವರ ಈ ದೊಡ್ಡ ಸಾಧನೆಗೆ ಅವರ ಪತ್ನಿಯ ಸಹಕಾರ ತುಂಬಾ ಇದೆ. ನಿವೇಶನ ಮಾರಿ ಪುಸ್ತಕ ತಂದಾಗಲೂ ಹಬ್ಬ ಹರಿದಿನಕ್ಕೆ ಹೊಸ ಬಟ್ಟೆ ತರುವ ಬದಲು ಪುಸ್ತಕ ತಂದಾಗಲು ಬೇಸರಿಸಿಕೊಳ್ಳದೆ ಸಾಥ್ ಕೊಟ್ಟಿದ್ದಾರೆ.

ಹುಡುಕಿ ಬಂದ ಹಲವು ಪ್ರಶಸ್ತಿಗಳು:

ಅಂಕೇಗೌಡರ ಸಾಧನೆ ಗುರುತಿಸಿ ರಾಜ್ಯ ಸರ್ಕಾರ 2014ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಸುವರ್ಣ ಕರ್ನಾಟಕ-50ರ ಸಂಭ್ರಮದಲ್ಲಿ ಅಪ್ರತಿಮ ರತ್ನ ಪ್ರಶಸ್ತಿ, 2011ರ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 2018ರಲ್ಲಿ ನಡೆದ ಪಾಂಡವಪುರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ, ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ಸಂಸ್ಥೆಯಿಂದ ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಕೇಗೌಡರ ಪುಸ್ತಕ ಮನೆ ‘ಲಿಮ್ಕಾ ದಾಖಲೆಗಳ ಪುಸ್ತಕ’ ಕೂಡ ಸೇರಿದೆ.

ಅಂಕೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮೇನಾಗರ ಪ್ರಕಾಶ್ ಸೇರಿದಂತೆ ಅನೇಕ ಸಾಹಿತಿಗಳು, ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.

ಕೆಲಸದ ನಡುವೆಯೂ ಎಂ.ಎ.ಪದವಿ ಮುಗಿಸಿದ ಅಂಕೇಗೌಡ

ಚಿನಕುರಳಿಯಲ್ಲಿ 5ನೇ ತರಗತಿ ಓದು ಮುಗಿಯುತ್ತಿದ್ದಂತೆಯೇ ತಂದೆ ಕುರಿ ಕಾಯುವುದಕ್ಕೆ ನೇಮಿಸಿದರು. ಕುರಿ ಕಾಯುವ ಕೆಲಸದಲ್ಲಿ ನಿರತರಾಗಿದ್ದರೂ ಓದಿನ ಆಸಕ್ತಿಯೇನು ಕುಂದಿರಲಿಲ್ಲ. ಇದನ್ನು ಗಮನಿಸಿದ ಪರಮೇಶ್ವರಯ್ಯ, ಅನಂತಯ್ಯ ಎಂಬ ಶಿಕ್ಷಕರ ಸಹಾಯದಿಂದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ನೇರವಾಗಿ ತೆಗೆದುಕೊಂಡು ಉತ್ತೀರ್ಣರಾಗಿ 10ನೇ ತರಗತಿ ವರೆಗಿನ ಶಿಕ್ಷಣವನ್ನು ಆ ಗ್ರಾಮದಲ್ಲೇ ಪಡೆದರು.

ಹಣಕಾಸಿನ ತೀವ್ರ ಮುಗ್ಗಟ್ಟು ಹಾಗೂ ಮನೆಯವರ ವಿರೋಧದ ನಡುವೆಯೂ ಇಂಟರ್ ಮಿಡಿಯೆಟ್ ಪದವಿಗಾಗಿ ಪಾಂಡವಪುರಕ್ಕೆ ಬಂದು ಒಪ್ಪೋತ್ತಿನ ಊಟ, ಸ್ಕಾಲರ್‌ ಶಿಪ್ ನೆರವಿನಿಂದ ಓದು ಮುಗಿಸಿದರು. ಆ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗಗೇ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಇಂಟರ್ ಮಿಡಿಯೆಟ್ ಮುಗಿಸಿದ ನಂತರ ಇವರು ಸೇರಿದ್ದು, ಅಂದಿನ ಎಂಎಸ್‌ಆರ್‌ಟಿಸಿ (ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಅಲ್ಲಿ ಕಂಡಕ್ಟರ್ ಆಗಿ ವೃತ್ತಿಗೆ.

ಆದರೂ ಕೆಲಸ ನಡುವೆ ಇಂಟರ್ ಮಿಡಿಯೆಟ್‌ನಲ್ಲಿ ಮೇಷ್ಟ್ರಾಗಿದ್ದ ಗೋಪಿನಾಥ್ ಬರ್ಕಿ ಅವರ ಮಾತುಗಳಿಂದ ಇವರು ಬದುಕು ಗಮನಾರ್ಹ ತಿರುವು ಪಡೆಯಿತು. ಮತ್ತೆ ವಿದ್ಯಾಭ್ಯಾಸದತ್ತ ಮುಖ ಮಾಡಿದ ಅಂಕೇಗೌಡರು 1971-73ರಲ್ಲಿ ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಲ್ಲಿ ಬಿ.ಎ.ಪದವಿ, 1976-77 ರಲ್ಲಿ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಎಂಎ ಪದವಿ ಪಡೆದುಕೊಂಡರು.