ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ವಾಣಿಜ್ಯ ವಾಹನಗಳಿಗೆ ಜಿಪಿಆರ್ ಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಆದೇಶ ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿ ಟ್ಯಾಕ್ಸಿ ಚಾಲಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರೀಫ್ ಮಾತನಾಡಿ, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಆರ್ ಎಸ್ ಎಂಬ ಅವೈಜ್ಞಾನಿಕ ಸಾಧನ ಅಳವಡಿಸಲು ನೀಡಿರುವ ಆದೇಶದಿಂದ ಟ್ಯಾಕ್ಸಿ ಚಾಲಕರಿಗೆ ಸಮಸ್ಯೆಯಾಗಿದೆ. ಈ ಆದೇಶ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಇಂತಹ ಅವೈಜ್ಞಾನಿಕ ಸಾಧನಗಳನ್ನು ಅಳವಡಿಸಲು ಕೇಂದ್ರ ಸರ್ಕಾರ ನಿಗದಿಪಡಿಸಿರುವುದು 7890 ರು. ಆದರೆ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಇದರ ಮೊತ್ತವು 15 ಸಾವಿರ ರು.ನಿಂದ 20 ಸಾವಿರ ರು. ವರೆಗೆ ಹಾಗೂ 1 ಪ್ಯಾನಿಕ್ ಬಟನ್ ದರ 650 ರು. ಜೊತೆಗೆ ಶೇಕಡ ೧೮ರಷ್ಟು ತೆರಗೆ ವಸೂಲಿ ಮಾಡಲಾಗುತ್ತಿದೆ. ಇದು ರಾಜ್ಯದ ಎಲ್ಲಾ ಟೂರಿಸ್ಟ್ ವಾಹನ ಚಾಲಕ, ಮಾಲಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಾರಿಗೆ ಸಚಿವರು ಈ ಬಗ್ಗೆ ಸೆಪ್ಟಂಬರ್ 24 ರವರೆಗೆ ಯಾವುದೇ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸದೆ ಎಫ್ ಸಿ ಮಾಡಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಇದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸಚಿವರ ಆದೇಶ ಗಡೆಗಣಿಸಿ ತರಾತುರಿಯಲ್ಲಿ ಎಫ್. ಸಿ. ಮಾಡಲು ಪ್ಯಾನಿಕ ಬಟನ್ ಕಡ್ಡಾಯ ಮಾಡಿದ್ದಾರೆ ಎಂದು ಟೀಕಿಸಿದರು. ಸರ್ಕಾರ ಟ್ಯಾಕ್ಸಿ ಉದ್ಯಮವನ್ನು ಪ್ರೋತ್ಸಾಹಿಸುವ ಬದಲು ನಿರ್ನಾಮ ಮಾಡುವ ಪ್ರಯತ್ನ ತಡೆಸುತ್ತಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಉಪಾಧ್ಯಕ್ಷ ಬಳ್ಳಗೆರೆ ಕುಮಾರ್, ಕೆ.ಟಿ.ಡಿ.ಓ. ರಾಜು ಮೊದಲಾದವರು ಭಾಗವಹಿಸಿದ್ದರು.