ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ ಪಂಜೆ ಮಂಗೇಶರಾಯರು: ಪ್ರಜ್ಞಾ ಮತ್ತಿಹಳ್ಳಿ

| Published : Feb 24 2025, 12:35 AM IST

ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ ಪಂಜೆ ಮಂಗೇಶರಾಯರು: ಪ್ರಜ್ಞಾ ಮತ್ತಿಹಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

150 ವರ್ಷಗಳ ಹಿಂದೆಯೇ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಕಲಿಸುವ ಪ್ರಯೋಗಕ್ಕೆ ನಾಂದಿ ಹಾಡಿದ ಪಂಜೆ ಮಂಗೇಶರಾಯರು.

ಪಂಜೆಯವರ ಬದುಕು-ಬರಹದ ಉಪನ್ಯಾಸದಲ್ಲಿ ಲೇಖಕಿಕನ್ನಡಪ್ರಭವಾರ್ತೆ ಬಳ್ಳಾರಿ

ಕನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಖ್ಯಾತಕವಿ ಪಂಜೆ ಮಂಗೇಶರಾಯರು ಕನ್ನಡದಲ್ಲಿ ಬೋಧನಾ ವಿಧಾನವನ್ನೇ ಬದಲಾಯಿಸಿ, ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳು ಶಿಕ್ಷಣ ಪಡೆಯುವ ಪದ್ಧತಿ ಜಾರಿಗೊಳಿಸಿದರು. 150 ವರ್ಷಗಳ ಹಿಂದೆಯೇ ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಕಲಿಸುವ ಪ್ರಯೋಗಕ್ಕೆ ನಾಂದಿ ಹಾಡಿದರು ಎಂದು ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ತಿಳಿಸಿದರು.

ನಗರದ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಕನ್ನಡ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಂಜೆ ಮಂಗೇಶರಾಯ-150 ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಪಂಜೆಯವರ ಬದುಕು ಮತ್ತು ಬರಹ ಕುರಿತು ಮಾತನಾಡಿದರು.

ಸಣ್ಣಕತೆಗಳ ಜನಕ ಎಂದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರನ್ನು ಕರೆದರೂ ಪಂಜೆ ಮಂಗೇಶರಾಯರು ಸಹ ಸಣ್ಣಕತೆಗಳನ್ನು ದೊಡ್ಡ ಸಂಖ್ಯೆಯಲ್ಲಿ ಬರೆದಿದ್ದಾರೆ. ಕನ್ನಡಕ್ಕೆ ಅನೇಕ ಹೊಸದುಗಳನ್ನು ಕೊಟ್ಟಿರುವ ಪಂಜೆ ಅವರು, ತುಳು, ಕೊಂಕಣಿ ಹಾಗೂ ಕೊಡವ ಭಾಷಿಕ ಸಂಸ್ಕೃತಿಯನ್ನು ಕನ್ನಡದೊಂದಿಗೆ ಒಂದಾಗಿಸಿದವರು. ನವೋದಯ ಸಾಹಿತ್ಯವನ್ನು ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ಬರೆದರಲ್ಲದೆ, ನಾಟಕ, ಕವಿತೆ, ಅನುವಾದಗಳಲ್ಲೂ ತೊಡಗಿಸಿಕೊಂಡಿದ್ದರು. ಇವರ ಜನಪ್ರಿಯ ಸಂಯೋಜನೆಗಳ ಪೈಕಿ ನಾಗರಹಾವೇ ಹಾವೊಳು ಹೂವೆ ಹಾಗೂ ಹುತ್ತರಿಹಾಡು ಹೆಚ್ಚು ಪ್ರಸಿದ್ಧಿಯಾಗಿದ್ದವು ಎಂದು ತಿಳಿಸಿದರು.

ಕನ್ನಡದ ಆಚಾರ್ಯ ಪುರುಷರಲ್ಲಿ ಪಂಜೆಯವರು ಅಗ್ರಗಣ್ಯರು. ಸೂಕ್ಷ್ಮಸಂವೇದನೆಯ ವ್ಯಕ್ತಿತ್ವದವರಾಗಿದ್ದ ಅವರು ಕತೆ, ಕವನ, ಹರಟೆ, ಪತ್ತೆದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋಧನೆ, ವೈಚಾರಿಕ ಲೇಖನಗಳು ಹೀಗೆ ಅನೇಕ ಸಾಹಿತ್ಯ ಕೃಷಿಯಲ್ಲಿ ಅವರು ತೊಡಗಿಸಿಕೊಂಡಿದ್ದರು. ಪಂಜೆ ಅವರ ಮನೆಮಾತು ಕೊಂಕಣಿಯಾಗಿತ್ತು. ಊರ ಜನರ ಜೊತೆಗಿನ ಮಾತು ತುಳುವಾಗಿತ್ತು. ಶಾಲೆಯಲ್ಲಿ ಕನ್ನಡ ಕಲಿತರು, ಉನ್ನತ ವ್ಯಾಸಂಗದಲ್ಲಿ ಇಂಗ್ಲಿಷ್ ಕಲಿಕೆಯಾಯಿತು. ಹೀಗೆ ಹಲವು ಭಾಷೆಗಳ ಪ್ರಭಾವ ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮ ಬೀರಿದವು. ಅವರು ಬದುಕಿರುವವರೆಗೆ ಅವರ ಕೃತಿಗಳು ಬರಲಿಲ್ಲ. ನಿಧನದ ಬಳಿಕ ಅವರ ಕೃತಿಗಳು ಪ್ರಕಟಿತಗೊಂಡವು. ಬದುಕಿನುದ್ದಕ್ಕೂ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಪ್ರಗತಿಗಾಗಿ ಶ್ರಮಿಸಿದ ಪಂಜೆ ಮಂಗೇಶರಾಯರು, ಕನ್ನಡ ಕನ್ನಡ ಎಂದು ಪ್ರಾಣ ಬಿಡುವ ಹಂಬಲ ನನ್ನದು ಎಂದು ಹೇಳಿಕೊಂಡಿದ್ದರು. ಅವರ ಇಚ್ಛೆಯಂತೆಯೇ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವಾಗಲೇ ನಿಧನವಾದರು ಎಂದು ಹೇಳಿದರು.

ವಿಮರ್ಶಕಿ ತಾರಿಣಿ ಶುಭದಾಯಿನಿ ಹೊಸಗನ್ನಡ ಸಾಹಿತ್ಯಕ್ಕೆ ಪಂಜೆಯವರ ಕೊಡುಗೆ ಕುರಿತು ಹಾಗೂ ಮಕ್ಕಳ ಸಾಹಿತಿ ಶಿವಲಿಂಗಪ್ಪ ಹಂದಿಹಾಳು ಅವರು ಪಂಜೆಯವರ ಶಿಶುಸಾಹಿತ್ಯದ ತಾತ್ವಿಕತೆ ಕುರಿತು ಮಾತನಾಡಿದರು.

ಬಿಎಂಸಿಆರ್‌ಸಿ ಕನ್ನಡ ಸಂಘದ ಅಧ್ಯಕ್ಷ ಪರಸಪ್ಪ ಬಂದ್ರಕಳ್ಳಿ, ಲೇಖಕ ಹಾಗೂ ಕನ್ನಡ ಪ್ರಾಧ್ಯಾಪಕ ದಸ್ತಗೀರ್ ಸಾಬ್ ದಿನ್ನಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯ ಚಿದಾನಂದ ಸಾಲಿ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ಬಸರಕೋಡು ಕಾರ್ಯಕ್ರಮ ನಿರ್ವಹಿಸಿದರು.

-----

23 ಬಿಆರ್‌ವೈ 1

ಬಳ್ಳಾರಿಯ ಕನ್ನಡ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪಂಜೆ ಮಂಗೇಶರಾಯ -150 ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ಲೇಖಕಿ ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿದರು.