ಸಾರಾಂಶ
ಕೆ.ಆರ್.ಪೇಟೆ ಪುರಸಭೆ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು, ಸಂಸದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸದಸ್ಯ ನಟರಾಜು ಹಾಗೂ ಜೆಡಿಎಸ್ ಸದಸ್ಯರಾದ ಶೋಭಾದಿನೇಶ್, ಮತ್ತು ಎಚ್.ಡಿ.ಅಶೋಕ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣ ಪುರಸಭೆ ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಪಂಕಜ ಪ್ರಕಾಶ್ ಆಯ್ಕೆಯಾದರು.ಪುರಸಭೆಯ ಶಹರಿ ರೋಜ್ ಗಾರ್ ಭವನದಲ್ಲಿ ನಡೆದ ಚುನಾವಣೆಯಲ್ಲಿ ಪಂಕಜ ಮತ್ತು ಜೆಡಿಎಸ್‌ನಿಂದ ಗಾಯಿತ್ರಿ ಸುಬ್ಬಣ್ಣ ನಾಮಪತ್ರ ಸಲ್ಲಿಸಿದ್ದರು. ಪಂಕಜ 14 ಮತ ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಗಾಯಿತ್ರಿ ಸುಬ್ಬಣ್ಣ ಕೇವಲ 6 ಮತ ಪಡೆದು ಪರಾಜಿತರಾದರು.
ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು, ಸಂಸದ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಸದಸ್ಯ ನಟರಾಜು ಹಾಗೂ ಜೆಡಿಎಸ್ ಸದಸ್ಯರಾದ ಶೋಭಾದಿನೇಶ್, ಮತ್ತು ಎಚ್.ಡಿ.ಅಶೋಕ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.ಕಾಂಗ್ರೆಸ್ ಅಭ್ಯರ್ಥಿ ಪಂಕಜ ಪ್ರಕಾಶ್ ಪರ ಸದಸ್ಯರಾದ ಪಂಕಜ, ಖಮರುಲ್ಲಾ ಬೇಗಂ, ಕಲ್ಪನ, ಸುಗುಣ, ಸೌಭಾಗ್ಯ, ಕೆ.ಸಿ.ಮಂಜುನಾಥ್, ಡಿ.ಪ್ರೇಂಕುಮಾರ್, ಕೆ.ಆರ್.ರವೀಂದ್ರಬಾಬು, ಕೆ.ಬಿ.ಮಹೇಶ್, ಎಚ್.ಎನ್.ಪ್ರವೀಣ್, ಪಕ್ಷೇತರ ಸದಸ್ಯ ತಿಮ್ಮೇಗೌಡ, ಜೆಡಿಎಸ್ ಸದಸ್ಯರಾದ ಗಿರೀಶ್, ಇಂದ್ರಾಣಿ ಮತ್ತು ಪದ್ಮ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.
ಜೆಡಿಎಸ್ ಅಭ್ಯರ್ಥಿ ಗಾಯಿತ್ರಿ ಪರ ಜೆಡಿಎಸ್ ಸದಸ್ಯರಾದ ಮಹದೇವಿ ನಂಜುಂಡ, ಗಾಯಿತ್ರಿ ಸುಬ್ಬಣ್ಣ, ಶುಭ ಗಿರೀಶ್, ಎಚ್.ಆರ್.ಲೋಕೇಶ್, ಕೆ.ಎಸ್.ಸಂತೋಷ್ ಕುಮಾರ್, ಕೆ.ಎಸ್.ಪ್ರಮೋದಕುಮಾರ್ ಬೆಂಬಲ ಸೂಚಿಸಿದರು.ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಎಸ್.ಯು.ಅಶೋಕ್ ಕಾರ್ಯ ನಿರ್ವಹಿಸಿದರು. ಪುರಸಭೆಯಲ್ಲಿ ಜೆಡಿಎಸ್ - ಬಿಜೆಪಿ, ಶಾಸಕರು ಹಾಗೂ ಸಂಸದರ ಮತ ಸೇರಿ 14 ಮಂದಿ ಬೆಂಬಲವಿದ್ದರೂ ಪಕ್ಷದೊಳಗಿನ ಆಂತರಿಕ ವೈಮನಸ್ಸಿನಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲು ಸಹಕಾರಿಯಾಯಿತು.