ಪತ್ರಿಕಾಗೋಷ್ಠಿಯಲ್ಲಿಯೇ ಪಪಂ ಮುಖ್ಯಾಧಿಕಾರಿ ತರಾಟೆಗೆ

| Published : Sep 25 2025, 01:00 AM IST

ಸಾರಾಂಶ

ಕಳೆದ ಹತ್ತಾರು ವರ್ಷಗಳಿಂದ ಹಲವಾರು ವಿಘ್ನಗಳನ್ನು ಎದುರಿಸಿ ಇಂದೋ ನಾಳೆಯೋ ಪ್ರಾರಂಭಗೊಳ್ಳಲಿದೆ ಎಂಬ ಆಶಾಭಾವನೆ ಹೊತ್ತಿದ್ದ ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣ ಹರಾಜಿಗೆ ಮತ್ತೊಂದು ವಿಘ್ನ ತಲೆದೋರಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ಕಳೆದ ಹತ್ತಾರು ವರ್ಷಗಳಿಂದ ಹಲವಾರು ವಿಘ್ನಗಳನ್ನು ಎದುರಿಸಿ ಇಂದೋ ನಾಳೆಯೋ ಪ್ರಾರಂಭಗೊಳ್ಳಲಿದೆ ಎಂಬ ಆಶಾಭಾವನೆ ಹೊತ್ತಿದ್ದ ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣ ಹರಾಜಿಗೆ ಮತ್ತೊಂದು ವಿಘ್ನ ತಲೆದೋರಿದೆ.

ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 44 ಅಂಗಡಿ ಮಳಿಗೆಗಳು ಇವೆ. ಈ ಎಲ್ಲಾ ಅಂಗಡಿ ಮಳಿಗೆಗಳನ್ನು ಇ - ಹರಾಜು ಮೂಲಕ ಅಂಗಡಿಗಳನ್ನು ಹರಾಜು ಹಾಕಲು ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿತ್ತು. ಮುಂದಿನ ತಿಂಗಳ ಮೊದಲ ವಾರದಿಂದಲೇ ಹರಾಜು ಪ್ರಕ್ರಿಯೆ ಪ್ರಾರಂಭಗೊಳ್ಳಬೇಕಿತ್ತು. ಆದರೆ ಈ ಹರಾಜು ಪ್ರಕ್ರಿಯೆ ಆಗುವ ಮುನ್ನ ವಾಣಿಜ್ಯ ಸಂಕೀರ್ಣದ ಸುತ್ತ ಮುತ್ತ ಇರುವ ಎಲ್ಲಾ ಅಂಗಡಿಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕೆಂದು ಬಹುತೇಕ ಎಲ್ಲಾ ಸದಸ್ಯರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರನ್ನು ಆಗ್ರಹಿಸಿದ್ದಾರೆ. ಈಗಾಗಲೇ ಪಟ್ಟಣ ಪಂಚಾಯಿತಿಗೆ ಕೋಟ್ಯಾಂತರ ರು.ನಷ್ಠವಾಗಿದೆ. ಇನ್ನೂ ನಷ್ಠ ಆಗಬೇಕೇ? ಎಂದು ಪ್ರಶ್ನಿಸಿದ್ದಾರೆ.ಪಟ್ಟಣ ಪಂಚಾಯಿತಿ ಆವರಣದಲ್ಲಿ ವಾಣಿಜ್ಯ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಕರೆದಿದ್ದ ಸಂದರ್ಭದಲ್ಲೇ ಹಲವಾರು ಸದಸ್ಯರೇ ಹರಾಜು ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿಯ ವತಿಯಿಂದ ಕಟ್ಟಿಸಲಾಗಿರುವ 44 ಮಳಿಗೆಗಳಿಂದ ಕನಿಷ್ಠವೆಂದರೂ ಒಂದು ಕೋಟಿಗೂ ಅಧಿಕ ಮುಂಗಡ ಹಣ ಬರಲಿದೆ. ಅಲ್ಲದೇ ಪ್ರತಿ ತಿಂಗಳು ಹದಿನೈದು ಲಕ್ಷದಷ್ಟು ಬಾಡಿಗೆ ಬರಲಿದೆ. ಈ ವಾಣಿಜ್ಯ ಸಂಕೀರ್ಣದ ಮುಂಭಾಗ ಅಂಗಡಿಗಳು ಇಟ್ಟಿರುವುದರಿಂದ ಬಾಡಿಗೆಗೆ ಯಾರೂ ಮುಂದೆ ಬರುವುದಿಲ್ಲ. ಅಲ್ಲದೇ ಬಂದರೂ ಸಹ ಕಡಿಮೆ ಮೊತ್ತಕ್ಕೆ ಬಾಡಿಗೆಗೆ ಕೂಗಿಕೊಳ್ಳುತ್ತಾರೆ. ಮುಂದೊಂದು ದಿನ ನಮಗೆ ವ್ಯಾಪಾರ ವಹಿವಾಟು ಆಗುತ್ತಿಲ್ಲವೆಂದು ಬಾಡಿಗೆಯನ್ನೇ ಕೊಡದಿದ್ದರೆ, ಕೊಟ್ಟರೂ ಕಡಿಮೆ ಕೊಟ್ಟರೆ ನೀವು ಅದರ ಉಳಿದ ಹಣವನ್ನು ಕಟ್ಟಿಕೊಡುತ್ತೀರಾ ಎಂದು ನೇರವಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ರವರನ್ನು ಅಧ್ಯಕ್ಷೆ ಶೀಲಾ ಶಿವಪ್ಪನಾಯಕ, ಸದಸ್ಯರಾದ ಯಜಮಾನ್ ಮಹೇಶ್, ಎನ್. ಆರ್.ಸುರೇಶ್, ಚಿದಾನಂದ್, ಆಂಜನ್ ಕುಮಾರ್, ಮಧು, ಸ್ವಪ್ನಾ ನಟೇಶ್, ಆಶಾ ರಾಜಶೇಖರ್, ಜಯ್ಯಮ್ಮ ಪ್ರಶ್ನಿಸಿದರು. ಲಕ್ಷಾಂತರ ರುಪಾಯಿ ಮುಂಗಡ ಕೊಟ್ಟು, ಸಾವಿರಾರು ರುಪಾಯಿ ಬಾಡಿಗೆ ಕೊಟ್ಟು, ಅಂಗಡಿ ಮಳಿಗೆ ಮಾಡಲು ಲಕ್ಷಾಂತರ ರುಪಾಯಿ ಬಂಡವಾಳ ಹೂಡುವವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಂಗಡಿಗೆ ತೆರಳಲು ಜಾಗವೇ ಇಲ್ಲದಂತಾಗಿದೆ. ವಾಣಿಜ್ಯ ಮಳಿಗೆಯ ಅಂಗಡಿಗೆ ಗ್ರಾಹಕರು ತೆರಳುವುದಾದರೂ ಹೇಗೆಂದು ಪ್ರಶ್ನಿಸಿದರು. ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡುವ ಮೊದಲು ಅಕ್ಕಪಕ್ಕ ಇರುವ ಎಲ್ಲಾ ಅಂಗಡಿಗಳನ್ನು ಎತ್ತಂಗಡಿ ಮಾಡಲೇ ಬೇಕು. ಎತ್ತಂಗಡಿ ಮಾಡದಿದ್ದರೆ ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಆಸಕ್ತಿ ತೋರುವುದಿಲ್ಲ. ಯಾವುದೇ ಮುಲಾಜಿಗೆ ಈಡಾಗದೇ ಪೋಲಿಸ್ ರಕ್ಷಣೆ ತೆಗೆದುಕೊಂಡು ಎಲ್ಲಾ ಅಂಗಡಿಗಳನ್ನು ತೆಗೆಸಿ. ರಸ್ತೆ ಬದಿಯಲ್ಲಿ ವಾಹನಗಳಲ್ಲಿ ಅಡ್ಡಾದಿಡ್ಡಿ ಇಟ್ಟಿದ್ದ ಹಾಗೂ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ಇಟ್ಟಿದ್ದ ಪರಿಣಾಮ ಬಸ್ ಮತ್ತು ದ್ವಿ ಚಕ್ರವಾಹನದ ನಡುವೆ ನಡೆದ ಅಪಘಾತದಲ್ಲಿ ಎರಡು ಕುಟುಂಬ ತಬ್ಬಲಿಯಾಯಿತು. ಓರ್ವ ಕೊನೆಯುಸಿರೆಳೆದ. ಈಗ ಅವರ ಕುಟುಂಬಕ್ಕೆ ಬೀದಿಬದಿ ವ್ಯಾಪಾರಿಗಳು ಬರುವರೇ, ಅಥವಾ ನೀವು ಬರುವಿರಾ ಎಂದು ಮುಖ್ಯಾಧಿಕಾರಿ ಶ್ರೀ ನಾಥ್ ಬಾಬುರವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ನೀವು ವಾಣಿಜ್ಯ ಸಂಕೀರ್ಣದ ಸುತ್ತಮುತ್ತಲ ಅಂಗಡಿಗಳನ್ನು ತೆಗೆಸದೇ ಹೋದಲ್ಲಿ ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರೂ ವಾಣಿಜ್ಯ ಸಂಕೀರ್ಣದ ಮುಂದೆಯೇ ಪ್ರತಿಭಟನೆ ಮಾಡ್ತೇವೆ. ತಾಲೂಕಿನಿಂದ ಪ್ರತಿದಿನ ಸಾವಿರಾರು ಮಂದಿ ಹಲವಾರು ಕಾರಣಕ್ಕೆ ಪಟ್ಟಣಕ್ಕೆ ಆಗಮಿಸುತ್ತಾರೆ. ಅಲ್ಲದೇ ಪಟ್ಟಣದಲ್ಲಿ ಸುಮಾರು 15 ಸಾವಿರ ಮಂದಿ ಇದ್ದಾರೆ. ಈ ವಾಣಿಜ್ಯ ಸಂಕೀರ್ಣದ ಮುಂಭಾಗವೇ ಮಿನಿ ವಿಧಾನಸೌಧವೂ ಇದೆ. ಸಾರ್ವಜನಿಕರಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ. ವಾಹನಗಳ ದಟ್ಟಣೆ ಇದೆ. ಈ ಎಲ್ಲಾ ಅಂಗಡಿಯವರಿಗೆ ಸಂತೆ ಮೈದಾನದಲ್ಲಿ ವಿಶೇಷವಾಗಿ ಅಂಗಡಿಗಳ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಈ ನಮ್ಮ ಮನವಿಗೆ ಆಡಳಿತ ಯಂತ್ರ ಸ್ಪಂದಿಸದಿದ್ದಲ್ಲಿ ನಾವೆಲ್ಲರೂ ವಾಣಿಜ್ಯ ಸಂಕೀರ್ಣದ ಮುಂದೆಯೇ ಧರಣಿ ಕೂರುವುದಂತೂ ಖಚಿತ ಎಂದು ಮುಖ್ಯಾಧಿಕಾರಿ ಶ್ರೀನಾಥ್ ಬಾಬು ರವರಿಗೆ ಎಚ್ಚರಿಕೆ ನೀಡಿದರು. ನಿಮಗೆ ಸಾವಿರಾರು ಜನರ ಹಿತಕ್ಕಿಂತ ಕೆಲವೇ ಜನರ ಶಿಫಾರಸ್ಸು ಹೆಚ್ಚಾಯಿತೇ ಎಂದು ಸದಸ್ಯರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.