ಪಪ್ಪಾಯ: ಹೆಚ್ಚು ಆದಾಯಕ್ಕೆ ಸಂದೀಪ್ ಪಾಟೀಲ ಉಪಾಯ

| Published : May 21 2024, 12:38 AM IST

ಪಪ್ಪಾಯ: ಹೆಚ್ಚು ಆದಾಯಕ್ಕೆ ಸಂದೀಪ್ ಪಾಟೀಲ ಉಪಾಯ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್ ತಾಲೂಕಿನ ಮಹಾರಾಜವಾಡಿ ಗ್ರಾಮದ ಯುವ ರೈತ ಸಂದೀಪ್ ಪಾಟೀಲ ತಮ್ಮ 3 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿರುವುದು.

ಕನ್ನಡಪ್ರಭ ವಾರ್ತೆ ಔರಾದ್

ತಾಲೂಕು ಒಣ ಬೇಸಾಯ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದೆ. ಸರಿಯಾಗಿ ಮಳೆಯಾಗದೇ ಪದೇ ಪದೆ ಬರಕ್ಕೆ ತುತ್ತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಯುವ ರೈತ ಪರ್ಯಾಯವಾಗಿ ಏನನ್ನಾದರೂ ಬೆಳೆಯಬೇಕೆಂಬ ಆಲೋಚನೆ ಮಾಡಿ ತೋಟಗಾರಿಕೆ ಬೆಳೆಯಲ್ಲಿ ಹೆಚ್ಚಿನ ಆದಾಯ ಗಳಿಸಲು ಮುಂದಾಗಿದ್ದಾರೆ.

ತಾಲೂಕಿನ ಮಹಾರಾಜವಾಡಿ ಗ್ರಾಮದ ಯುವ ರೈತ ಸಂದೀಪ್ ಪಾಟೀಲ ತಮ್ಮ 3 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದು ಲಕ್ಷ, ಲಕ್ಷ ಆದಾಯ ಗಳಿಸುತ್ತಿದ್ದಾರೆ. ಸಂದೀಪ್ ಓದಿದ್ದು ಐಟಿಐ. ಸೂಕ್ತ ಕೆಲಸ ಸಿಗದ ಕಾರಣ ಎದೆಗುಂದದೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ.

ತಮ್ಮ3 ಎಕರೆ ಜಮೀನಿನಲ್ಲಿ 15 ನಂಬರ್‌ ತಳಿ, ಪೈಟಾನ್‌ ತಳಿ ಪಪ್ಪಾಯ ಗಿಡಗಳನ್ನು 8 ಅಡಿ ಅಂತರದಲ್ಲಿ 3,000 ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಕೆ ಬದಲು, ಸಾವಯವ ಪದ್ಧತಿಯಲ್ಲಿ ತಿಪ್ಪೆ ಗೊಬ್ಬರ ಉಪಯೋಗ ಮಾಡಿದ್ದರಿಂದ ಖರ್ಚಿನ ಪ್ರಮಾಣ ಕಡಿಮೆಯಾಗಿ ಗುಣಮಟ್ಟದ ಇಳುವರಿ ಬರಲು ಕಾರಣವಾಗಿದೆ.

ಪಪ್ಪಾಯಿ ನಾಟಿ ಮಾಡಿದ 8 ತಿಂಗಳ ಬಳಿಕ ವಾರಕ್ಕೆ ಒಂದು ಸಾರಿ ಕಾಯಿ ಕಟಾವಿಗೆ ಬರುತ್ತದೆ. ಪಪ್ಪಾಯ ಬೆಳೆಯನ್ನು ನಾವೇ ಸ್ವತಃ ಕಡಿದು ತೆಲಂಗಾಣದ ನಾರಯಣಖೇಡ್ ಮತ್ತು ಬೀದರ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆ ಎನ್ನುತ್ತಾರೆ ರೈತ ಸಂದೀಪ್.

ಜಮೀನಿನಲ್ಲಿ ಬಾವಿ ಕೊರೆಸಿದ್ದು, ಲಭ್ಯವಾದ ನೀರಿನಲ್ಲಿ ಹನಿ ನೀರಾವರಿ ಮೂಲಕ ಪಪ್ಪಾಯ ಬೆಳೆಯುತ್ತಿದ್ದಾರೆ. ಪ್ರತಿ ಪಪ್ಪಾಯಿ ಹಣ್ಣು 2 ಕೆಜಿ ತೂಕ ಹೊಂದಿದ್ದು, ಈ ವರ್ಷ 45 ಕ್ವಿಂಟಲ್‌ಗೂ ಹೆಚ್ಚು ಪಪ್ಪಾಯ ಇಳುವರಿ ಬಂದಿದೆ. ಪ್ರತಿ ಕ್ವಿಂಟಲ್ 4ರಿಂದ 5 ಸಾವಿರ ರುಪಾಯಿಗೆ ಮಾರಾಟವಾಗಿದ್ದು 2 ಲಕ್ಷ ಆದಾಯ ತಮ್ಮದಾಗಿಸಿಕೊಂಡು ಸಂತೃಪ್ತಿ ಜೀವನ ಸಾಗಿಸುತ್ತಿದ್ದಾರೆ.ತೋಟಕ್ಕೆ ರೈತರ ಭೇಟಿ:

ಸಂದೀಪ್ ಪಾಟೀಲ ತೋಟಕ್ಕೆ ಹೊಸದಾಗಿ ತೋಟಗಾರಿಕೆ ಪಪ್ಪಾಯ ಬೆಳೆ ಬೆಳೆಯಬೇಕು ಎಂಬ ಆಸೆಯನ್ನಿಟ್ಟುಕೊಂಡ ರೈತರು ಭೇಟಿ ಕೊಟ್ಟು ಸಲಹೆ ಪಡೆದುಕೊಳ್ಳುತ್ತಾರೆ. ತೋಟಕ್ಕೆ ಆಗಮಿಸಿದ ರೈತರನ್ನು ಉಪಚರಿಸಿ ಅವರಿಗೆ ದಿನವಿಡೀ ಪಪ್ಪಾಯ ಬೆಳೆಯ ಬಗ್ಗೆ ತಿಳಿಸುತ್ತಾರೆ. ಬರೀ ಕೃಷಿ ಕಾರ್ಯದಲ್ಲಿ ಅಷ್ಟೇ ಅಲ್ಲದೇ ರಂಗನಾಥ ಸಾಮಾಜಿಕ ಕಾರ್ಯದಲ್ಲೂ ಸದಾ ಮುಂಚೂಣಿಯಲ್ಲಿದ್ದಾರೆ.ಯಾವುದೇ ಕ್ರಿಮಿನಾಶಕ ಔಷಧಿ ಬಳಸದೇ ತಿಪ್ಪೆ ಗೊಬ್ಬರ ಬಳಸುತ್ತಾ , ಕೃಷಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡಬೇಕು. ದೆಹಲಿ, ಗೋವಾ, ಮಂಗಳೂರು, ಮೈಸೂರು ಕಡೆ ಪಪ್ಪಾಯಿ ರವಾನೆ ಆಗುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬಹುದು. ಪಪ್ಪಾಯ ಬೆಳೆಯುವವರು ಆಸಕ್ತಿ ಇದ್ದರೆ ನಮ್ಮ ತೋಟಕ್ಕೆ ಬನ್ನಿ.

ಸಂದೀಪ್ ಪಾಟೀಲ, ಮಹಾರಾಜವಾಡಿ. ಯುವ ರೈತ