ಸಾರಾಂಶ
ಇನ್ನೂ 61 ತ್ರಿಬಲ್ ರೈಡಿಂಗ್, 204 ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್ ಪ್ಲೇಟ್, ವೀಲಿಂಗ್ ಪ್ರಕರಣ ದಾಖಲಿಸಿ, ಒಟ್ಟು 7 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕೊಲೆ, ಅತ್ಯಾಚಾರ ಕೊಲೆ ಸೇರಿದಂತೆ ನಗರದಲ್ಲಿ ವಿವಿಧ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಮೈಸೂರು ಪೊಲೀಸ್ ರೌಡಿ ಪ್ರತಿಬಂಧಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ರಾತ್ರಿ ಸಹ ಕಾರ್ಯಾಚರಣೆ ನಡೆಸಿ, ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸುತ್ತಿರುವ ರೌಡಿ ಪ್ರತಿಬಂಧಕ ದಳದ ಪೊಲೀಸರು, ರೌಡಿಗಳು ಮತ್ತು ಶಂಕಿತ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಸೋಮವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ 227 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. 288 ಮಂದಿ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 422 ಮಂದಿ ವಿರುದ್ಧ ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ ಪ್ರಕರಣಗಳು ದಾಖಲಿಸಲಾಗಿದೆ. ಬಿಎನ್ಎಸ್ಎಸ್ ಕಾಯ್ದೆಯ 126 ಮತ್ತು 129 ಸೆಕ್ಷನ್ ಅಡಿಯಲ್ಲಿ 13 ಪ್ರಕರಣ ದಾಖಲಾಗಿದೆ.ಅಲ್ಲದೆ, ಎನ್.ಆರ್ ಪೊಲೀಸ್ ಠಾಣೆ ಮತ್ತು ಮಂಡಿ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸಿ, ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.
ಇನ್ನೂ 61 ತ್ರಿಬಲ್ ರೈಡಿಂಗ್, 204 ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್ ಪ್ಲೇಟ್, ವೀಲಿಂಗ್ ಪ್ರಕರಣ ದಾಖಲಿಸಿ, ಒಟ್ಟು 7 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಏರಿಯಾ ಡಾಮಿನೇಷನ್:
ಅಲ್ಲದೆ, ಗೌಸಿಯಾನಗರ, ಶಾಂತಿನಗರ, ಹೂಟಗಳ್ಳಿ, ಹಿನಕಲ್, ನಾಚನಹಳ್ಳಿಪಾಳ್ಯ, ಜ್ವಾಲಾಮುಖಿ ವೃತ್ತ ಪಾರ್ಕಿಂಗ್, ದಸರಾ ವಸ್ತುಪ್ರದರ್ಶನ ಮೈದಾನ, ಇಟ್ಟಿಗೆಗೂಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಏರಿಯಾ ಡಾಮಿನೇಷನ್ ಹೆಸರಿನಲ್ಲಿ ಪೊಲೀಸರು ಪಥಸಂಚಲನ ನಡೆಸಿ, ಸಾರ್ವಜನಿಕರಿಗೆ ಅಭಯ ಹಾಗೂ ಅಪರಾಧ ಹಿನ್ನೆಲೆಯುಳ್ಳವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.