ಉಡುಪಿ ಧರ್ಮಪ್ರಾಂತ್ಯದ ಪರಮ ಪ್ರಸಾದದ ಮೆರವಣಿಗೆ

| Published : Nov 27 2024, 01:04 AM IST

ಉಡುಪಿ ಧರ್ಮಪ್ರಾಂತ್ಯದ ಪರಮ ಪ್ರಸಾದದ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತಾದಿಗಳ ಉಪಸ್ಥಿತಿಯೊಂದಿಗೆ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.

ಈ ಮಹೋತ್ಸವದ ಪ್ರದಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಭಕ್ತಾದಿಗಳಿಗೆ ಸಂದೇಶ ನೀಡಿದರು. ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕ್ರೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಜೀವನದಲ್ಲಿ ಕ್ಷಮೆ ಪ್ರೀತಿ, ಸೇವೆಯ ಮೂಲಕ ದೇವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡಬೇಕು ಎಂದು ಕರೆ ನೀಡಿದರು.

ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಂ.ವಿಲ್ಸನ್ ಡಿಸೋಜಾ ಪರಮ ಪ್ರಸಾದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.

ಈ ವೇಳೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಧರ್ಮಗುರು ವಂ| ಡಾ|ಜೆನ್ಸಿಲ್ ಆಲ್ವಾ ಪವಿತ್ರ ಬೈಬಲ್ ವಾಚನ ಮಾಡಿ ಅದರ ಮೇಲೆ ಪ್ರವಚನ ನೀಡಿದರು.

ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಿಂದ ಸುಮಾರು 3000 ಕ್ಕೂ ಅಧಿಕ ಮಂದಿ ಭಕ್ತಾದಿಗಳು, 60ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ವಿವಿಧ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ಡಾ.ಲೆಸ್ಲಿ ಡಿಸೋಜ, ವಂ.ಆಲ್ಬನ್ ಡಿಸೋಜಾ, ವಂ. ಚಾರ್ಲ್ಸ್ ಮಿನೇಜಸ್, ವಂ. ರೋಕ್ ಡೇಸಾ, ವಂ. ಒಲಿವರ್ ನಜ್ರೆತ್, ವಂ|ಪ್ರದೀಪ್ ಕಾರ್ಡೊಜಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.

ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಆರಾಧನೆಯ ವಿಧಿಯನ್ನು ವಂ|ಸಿರಿಲ್ ಲೋಬೊ ಭಕ್ತಿಯುತವಾಗಿ ನಡೆಸಿದರು. ಪ್ರಿಯಾ ಫುರ್ಟಾಡೊ ಧನ್ಯವಾದ ಸಮರ್ಪಿಸಿದರು