ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪರಮಾತ್ಮ ನಮಗೆಲ್ಲರಿಗೂ ಪರಮ ಗುರು, ನಾವು ಗುರು ವಂದನೆ ಮಾಡುತ್ತೇವೆ, ಗುರುಗಳನ್ನು ಕೊಟ್ಟವನು ಪರಮಾತ್ಮ, ಈ ಜನ್ಮದಲ್ಲಿ ನಮಗೆಲ್ಲರಿಗೂ ತಂದೆ- ತಾಯಿ, ಗುರುಗಳನ್ನು ಕೊಟ್ಟವನೇ ಪರಮಾತ್ಮ ತಾನೆ? ಹೀಗಾಗಿ ಚಿನ್ಮಯ ರೂಪಿ ಪರಮಾತ್ಮ ನಮಗೆಲ್ಲರಿಗೂ ಗುರಾತ್ಮ ಎಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.ನಗರದ ಬ್ರಹ್ಮಪೂರದ ಶ್ರೀ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ಗುರುಪೂರ್ಣಿಮೆ ನಿಮಿತ್ಯ ಭಾನುವಾರ ರಾತ್ರಿ ಭಕ್ತ ವೃಂದದಿಂದ ನಡೆದ ಗುರುವಂದನಾ ಸಮಾರಂಭದಲ್ಲಿ ಸಾನಿಧ್ಯವಹಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ಸನಾತನ ಹಿಂದು ಧರ್ಮದ ಸಂಸ್ಕೃತಿಯಿಂದ ಯಾವ ಕಾರಣಕ್ಕೂ ನಾವು ವಿಮುಖರಾಗೋದು ಬೇಡ. ಸದ್ಯದ ಸಂದರ್ಭದಲ್ಲಿ ಪುರುಷರೆಲ್ಲರೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ, ಮಹಿಳೆ.ರೆಲ್ಲರೂ ಜಗನ್ನಾಥದಾಸರು ರಚಿಸಿರುವ ಹರಿಕಥಾಮೃತ ಸಾರ ಪಾರಾಯಣ ಮಾಡಿರಿ ಎಂದು ಕರೆ ನೀಡಿದರು.ವಿಷ್ಣು ಸಹಸ್ರನಾಮ, ಹರಿಕಥಾಮೃತ ಸಾರ ಪಾಠ ಪ್ರವಚನದಲ್ಲಿ ಕಾಲ ಕಳೆಯಿರಿ, ಗುರುಗಳ ಮುಖೇನ ಪಾಠ ಹೇಳಿಸಿಕೊಂಡು ಪರಿಣಿತಿ ಪಡೆಯುವಂತೆಯೂ ಗುರುಗಳು ಕರೆ ನೀಡಿದರು.
ಮನೆಯಲ್ಲಿ ನೀವಷ್ಟೇ ಅಲ್ಲ, ನಿಮ್ಮ ಮಕ್ಕಳು, ಮೊಮ್ಮಕ್ಕಳು, ಬಂಧುಗಳಲ್ಲರೂ ವಿಷ್ಣು ಸಹಸ್ರನಾಮ, ಹರಿಕಥಾಮೃತ ಸಾರ ಪಾರಾಯಣ ಮಾಡುವಂತೆ ಪ್ರೇರಣೆ ನೀಡಿರಿ ಎಂದೂ ಸೇರಿದ್ದ ಆಸ್ತಿಕ ಭಕ್ತವೃಂದದವರಿಗೆ, ಅಲ್ಲಿದ್ದಂತಹ ಸ್ತ್ರೀಯರಿಗೆ, ಪುರುಷರಿಗೆ ಕರೆ ನೀಡಿದರು.ಗುರು ಪರಂಪರೆ ತುಂಬ ದೊಡ್ಡದಿದೆ, ಆ ಪರಂಪರೆಯಲ್ಲಿ ಅನೇಕರು ಗುರುಗಳು, ಮಹಾ ಗುರುಗಳು, ಪರಮ ಗುರುಗಳು ಆಗಿ ಹೋಗಿದ್ದಾರೆ. ಅವರೆಲ್ಲರ ಶಕ್ತಿಯೇ ಇಂದಿನ ಗುರುತ್ವ ಶಕ್ತಿಯಾಗಿದೆ. ನಾವು ಏನಾದರೂ ಮಾಡಿದ್ದೇವೆ ಅಂತಾದರೆ ಅದರ ಹಿಂದೆ ಗುರು ಪರಂಪರೆಯ ಮಹಾನ್ ಶಕ್ತಿಯೇ ಕಾರಣ ಎಂದರು ತಮ್ಮೆಲ್ಲ ಕೆಲಸ ಕಾರ್ಯಗಳ ಹಿಂದಿನ ಗುರು ಪರಂಪರೆಯನ್ನು ಶ್ರೀಗಳು ಸ್ಮರಿಸಿದರು.
ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಸತ್ಯಾತ್ಮ ತೀರ್ಥ ಶ್ರೀಪಾದರು ತಮ್ಮ ಪರಮ ಗುರುಗಳಾದ ಸತ್ಯಪ್ರಮೋದ ತೀರ್ಥರನ್ನು ಸ್ಮರಿಸಿ ಅಲ್ಲಿಯೇ ಇಡಲಾಗಿದ್ದ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸೇರಿದ್ದ ಶಿಷ್ಯರೆಲ್ಲರೂ ಗುರುಗಳ ಮಲೆ ಪುಷ್ಪವೃಷ್ಟಿಗರೆಯುತ್ತ ಗುರು ವಂದನೆಗೆ ಕಳೆ ತಂದುಕೊಟ್ಟರು.ಪಂಡಿತರಾದ ಗೋಪಾಲಾಚಾರ್ಯ ಅಕ್ಮಂಚಿ, ವಿನೋದಾಚಾರ್ಯ ಗಲಗಲಿ, ವಾಸುದೇವಾಚಾರ್ಯ ಕಾನುಗೋವಿ, ಅಭಯಾಚಾರ್ಯ, ಪ್ರಸನ್ನಾಚಾರ್ಯ ಜೋಷಿ ಸೇರಿದಂತೆ ಅನೇಕರು ಗುರುಗಳ ಮಹಿಮೆಯ ಬಗ್ಗೆ ಉಪನ್ಯಾಸ ನೀಡಿದರು. ಉತ್ತರಾದಿ ಮಠಾಧಿಕಾರಿ ರಾಮಾಚಾರ್ಯ ಘಂಟಿ, ರಘೋತ್ತಮ ಘಂಟಿ, ಸತ್ಯಾತ್ಮ ಸೇನೆ, ಸತ್ಯಾತ್ಮ ಯುವ ಸೇನೆಯ ಕಾರ್ಯಕರ್ತರು, ರಾಮಮೂರ್ತಿ ಜೋಷಿ, ಮನೋಹರರಾವ ಜೋಷಿ ಇದ್ದರು
ನಂತರ 108 ಜನರು ಗುರು ವಂದನೆ ನಿಮಿತ್ತ ನೀಡಿದ್ದ ತಲಾ 2 ಸಾವಿರ ರು ನಂತೆ ಸಂಗ್ರಹಿಸಲಾಗಿದ್ದ ಕಾಣಿಕೆಯನ್ನು ಭಕ್ತರು ಗುರುಗಳಿಗೆ ಅರ್ಪಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಶ್ರೀನಿವಾಸ ದೇಸಾಯಿ ಸೇರಿದಂತೆ ಅನೇಕರು ಗುರು ವಂದನೆಯಲ್ಲಿ ಪಾಲ್ಗೊಂಡು ಗುರುಗಳ ಆಶಿರ್ವಾದ ಪಡೆದುಕೊಂಡರು.