ಇಲ್ಲಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ಇಟ್ಟು ನಾಮಫಲಕ ಅಳವಡಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಜೆ ಕ್ರೀಡಾಂಗಣ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಮನರೇಗಾದಿಂದ ವಿಬಿ ರಾಮ್‌ ಜಿ ಹೆಸರು ಬದಲಾವಣೆ ಖಂಡಿಸಿ ಕೈ ನಾಯಕರು ಹೋರಾಟ ನಡೆಸುತ್ತಿರುವಾಗಲೇ ಇಲ್ಲಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರು ಇಟ್ಟು ನಾಮಫಲಕ ಅಳವಡಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಸಂಜೆ ಕ್ರೀಡಾಂಗಣ ಎದುರು ಪ್ರತಿಭಟನೆ ನಡೆಸಿದರು.

ಬಿಜೆಪಿ ಬಾವುಟ, ಮಹಾತ್ಮ ಗಾಂಧಿ ಭಾವಚಿತ್ರ ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಡಾ.ಪರಮೇಶ್ವರ್ ಹೆಸರನ್ನು ತೆಗೆದು ಮಹಾತ್ಮ ಗಾಂಧಿ ಹೆಸರನ್ನೇ ಉಳಿಸಬೇಕು ಎಂದು ಒತ್ತಾಯಿಸಿ, ಡಾ.ಪರಮೇಶ್ವರ್ ವಿರುದ್ಧ ಘೋಷಣೆ ಕೂಗಿದರು.ನಗರ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಟಿ.ಎಚ್.ಹನುಮಂತರಾಜು ಮಾತನಾಡಿ, ಹಾಳಾಗಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದೆ. ಇದನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣದಂತೆ ನಿರ್ಮಾಣ ಮಾಡಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾಳಜಿ ವಹಿಸಿದ್ದರು. ಏನೂ ಮಾಡದ ಸಚಿವ ಡಾ.ಪರಮೇಶ್ವರ್ ಅವರು ಯಾರೋ ಮಾಡಿದ ಕೆಲಸಕ್ಕೆ ತಮ್ಮ ಹೆಸರು ಹಾಕಿಕೊಂಡು ಚಿಲ್ಲರೆ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದು ಟೀಕಿಸಿದರು.ಮಹಾತ್ಮ ಗಾಂಧಿಯನ್ನು ದತ್ತು ಪಡೆದವರಂತೆ ಪ್ರಚಾರ ಮಾಡುವ ಕಾಂಗ್ರೆಸ್ ನಾಯಕರು ಇಲ್ಲಿ ಗಾಂಧಿ ಹೆಸರನ್ನೇ ತೆಗೆದು ತಮ್ಮ ಹೆಸರನ್ನು ಇಟ್ಟುಕೊಳ್ಳುವ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಕ್ರೀಡಾಂಗಣಕ್ಕೆ ಕ್ರೀಡಾಪಟುಗಳ ಹೆಸರು ಇಡಬೇಕಾದ ಪರಿಸ್ಥಿತಿ ಬಂದರೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಅನೇಕ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ಅವರ ಹೆಸರಿಡಲಿ. ಕ್ರೀಡಾಂಗಣಕ್ಕೆ ಡಾ.ಪರಮೇಶ್ವರ್ ಹೆಸರಿಡುವ ಪ್ರಯತ್ನ ಕೈ ಬಿಟ್ಟು ಮಹಾತ್ಮ ಗಾಂಧಿಯ ಹೆಸರನ್ನೇ ಉಳಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಜಿಲ್ಲಾ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಟಿ.ಕೆ.ಧನುಷ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್, ಇಂದ್ರಕುಮಾರ್, ಪುಟ್ಟರಾಜು, ಮಹೇಶ್‌ಬಾಬು, ಮುಖಂಡರಾದ ಗಣೇಶ್‌ಪ್ರಸಾದ್, ಸತ್ಯಮಂಗಲ ಜಗದೀಶ್, ಕುಮಾರ್, ಹನುಮಂತರಾಜು, ಗಂಗೇಶ್, ಪ್ರೀತಂ, ರುದ್ರೇಶ್, ಪ್ರಸನ್ನಕುಮಾರ್, ವೆಂಕಟೇಶಾಚಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.